ಕೂಡಿಗೆ, ಆ. 29: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿ ಹರಿಯುತ್ತಲಿರುವ ಹಾರಂಗಿ ಮುಖ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ತಡೆಗೋಡೆಯಿಲ್ಲದೆ ಅಪಾಯ ದಂಚಿನಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಮಾರ್ಗವು ಕುಶಾಲನಗರ ದಿಂದ ಬ್ಯಾಡಗೊಟ್ಟ ಮತ್ತು ಸೀಗೆಹೊಸೂರಿಗೆ ತೆರಳಲು ಹತ್ತಿರದ ಮಾರ್ಗವಾಗಿರುತ್ತದೆ. ಈ ಮಾರ್ಗದಲ್ಲಿ ದಿನಂಪ್ರತಿ ಕಲ್ಲುಕೋರೆಯ ಲಾರಿಗಳು ಓಡಾಡುವದರಿಂದ ರಸ್ತೆ ತೀರಾ ಹದಗೆಟ್ಟಿದೆ. ಅಲ್ಲದೇ ಸೇತುವೆಯ ಎರಡೂ ಬದಿಯ ತಡೆಗೋಡೆಗಳು ಕುಸಿದಿರುವದರಿಂದ ರಸ್ತೆಯಲ್ಲಿ ಹನ್ನೆರಡು ಗ್ರಾಮಗಳ ನೂರಾರು ವಾಹನ ಸವಾರರು ಚಲಿಸುತ್ತಾರೆ. ಅಪಾಯದಂಚಿನಲ್ಲಿರುವ ಸೇತುವೆಯನ್ನು ಸರಿಪಡಿಸುವ ಬಗ್ಗೆ ಗ್ರಾಮಸಭೆಯಲ್ಲಿ ಹಾಗೂ ವಾರ್ಡ್ ಸಭೆಯಲ್ಲಿ ಚರ್ಚೆ ನಡೆಸಿದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ.

ಸಂಬಂಧಿಸಿದ ಹಾರಂಗಿ ಸಹಾಯಕ ಇಂಜಿನಿಯರ್ ನಾಗರಾಜ್ ಮಾತನಾಡಿ, ಈ ಸಾಲಿನಲ್ಲಿ ಕ್ರಿಯಾಯೋಜನೆ ಸೇರಿಕೊಂಡಿದ್ದು, ಸಾರ್ವಜನಿಕರ ಒತ್ತಾಯದಿಂದ ಸೇತುವೆಗೆ ತಡಗೋಡೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವದು ಎಂದರು.