ಸುಂಟಿಕೊಪ್ಪ, ಆ. 28: ಇಲ್ಲಿಗೆ ಸಮೀಪದ ಅತ್ತೂರು ನಲ್ಲೂರು ದುರ್ಗಿ ತೋಟಕ್ಕೆ ಕಾಡಾನೆಗಳ ಹಾವಳಿಯಿಂದ ಕೃಷಿ ನಷ್ಟವಾಗಿದೆ ಎಂದು ತೋಟದ ಮಾಲೀಕರು ತಿಳಿಸಿದ್ದಾರೆ
ಕಂಬಿಬಾಣೆ ಪಂಚಾಯಿತಿಯ ವ್ಯಾಪ್ತಿಯ ಅತ್ತೂರು ನಲ್ಲೂರು ವ್ಯಾಪ್ತಿಯಲ್ಲಿ ಕಾಡಾನೆಗಳು ತೋಟಗಳಲ್ಲಿ ಲಗ್ಗೆಯಿಟ್ಟು ಕಾಫಿ, ಕರಿಮೆಣಸು ತೆಂಗು, ಹಲಸಿನ ಮರಗಳನ್ನು ಧ್ವಂಸಗೊಳಿಸಿವೆ ಎಂದು ತೋಟದ ಮಾಲೀಕರಾದ ಪಿ.ಪಿ. ಲೀಲಾವತಿ ನೋವು ವ್ಯಕ್ತ ಪಡಿಸಿದ್ದಾರೆ.
ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಅಂದಗೋವೆ ಗ್ರಾಮದ ಜಯಕುಮಾರ್ ಅವರ ತೋಟಕ್ಕೆ ಆನೆಗಳು ದಾಳಿ ನಡೆಸಿ ಸೋಲಾರ್ ಬೇಲಿಯನ್ನು ಸಂಪೂರ್ಣ ನಾಶಗೊಳಿಸಿದೆ ಎಂದು ದೂರಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಆನೆಗಳು ಕಂಡುಬರುತ್ತಿದ್ದು, ಪ್ರಯಾಣಿಕರಿಗೆ ಆನೆ ಉಪಟಳದಿಂದ ತೊಂದರೆ ತಪ್ಪಿದಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೃಷಿಕರಿಗೆ ಆಗಾಗ ಅಪಾರ ನಷ್ಟ ಸಂಭವಿಸಿದೆ. ಅರಣ್ಯ ಇಲಾಖೆಯವರು ಕಾಡಾನೆಗಳು ನಾಡಿಗೆ ಬರದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.