ಮಡಿಕೇರಿ, ಆ. 28 : ನಾವೆಲ್ಲರೂ ಸೈನಿಕರಾಗಲು ಸಾಧ್ಯವಿಲ್ಲ ಆದರೆ, ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸೈನಿಕರಂತೆಯೇ ದೇಶ ಮೊದಲು ಎಂಬ ಭಾವನೆಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದಾಗ ಅದು ಕೂಡ ದೇಶ ಸೇವೆ ಎನಿಸಿಕೊಳ್ಳುತ್ತದೆ ಎಂದು ಮಂಡ್ಯದ ಸ್ತ್ರೀ ರೋಗ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು ಆಗಿರುವ ಡಾ. ಬಿ.ಕೆ ಸುರೇಶ್ ಹೇಳಿದ್ದಾರೆ.
ನಗರದ ಕೊಡವ ಸಮಾಜ ಆವರಣದಲ್ಲಿ ಪ್ರಜ್ಞಾ ಕಾವೇರಿ ಮಡಿಕೇರಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಗು ಆಶ್ರಯದಲ್ಲಿ ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರ ಸಮರ ಭೈರವಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯ ಮಾಡಿ ಅವರು ಮಾತನಾಡಿದರು. ಎರಡು ವರ್ಷಗಳ ಶ್ರದ್ಧಾಪೂರಕ ಅಧ್ಯಯನ ಫಲವಾಗಿ ಈ ಪುಸ್ತಕ ಮೂಡಿ ಬಂದಿದ್ದು ದೇಶ ಮೊದಲು ಉಳಿದೆಲ್ಲವೂ ಅನಂತರ ಎಂಬ ಅಮರ ಸಂದೇಶ ಈ ಕೃತಿಯಲ್ಲಿದೆ. ಹಲವು ದೇಶ ಭಕ್ತರ ಪ್ರಾಣಾರ್ಪಣೆ, ಬಲಿದಾನಗಳ ಕುರಿತು ಸಂತೋಷ್ ತಮ್ಮಯ್ಯ ದಾಖಲಿಸಿದ್ದಾರೆ ಎಂದು ಸುರೇಶ್ ಬಣ್ಣಿಸಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ನಿವೃತ್ತ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು, ಈ ಪುಸ್ತಕ ಎಲ್ಲರಿಗೂ ಪ್ರಿಯವಾಗಬೇಕು. ಎರಡು ವರ್ಷಗಳ ಅಧ್ಯಯನ ಹಿನ್ನೆಲೆಯಲ್ಲಿ ಸೇನಾಧಿಕಾರಿಗಳನ್ನು ಸೈನಿಕರನ್ನು ಸಂದರ್ಶಿಸಿ ಅವರ ಜೀವನ ಕಥೆಯನ್ನು ವಿಮರ್ಶಿಸಿ ಬರೆದ ಕೃತಿಯಾಗಿದ್ದು ಈ ಪುಸ್ತಕವನ್ನು ನಮ್ಮ ಯುವ ಪೀಳಿಗೆ ಓದಿ ಪ್ರೇರಿತರಾಗಿ ಸೈನ್ಯಕ್ಕೆ ಸೇರುವಂತಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್, ನಮ್ಮ ಸಂಸ್ಕøತಿ, ಪರಂಪರೆ, ಹಬ್ಬ, ಹರಿದಿನಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುವದು ಮಾತ್ರವಲ್ಲದೆ ನಮ್ಮ ಯುವ ಪೀಳಿಗೆಗೆ ನಮ್ಮ ಪರಂಪರೆ, ಪದ್ಧತಿಗಳನ್ನು ಹೇಳಿಕೊಳ್ಳುವ ಮೂಲಕ ಶಾಂತಿ ಸಾಧಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್ ದೇವಯ್ಯ ಮಾತನಾಡಿ, ಈ ಪುಸ್ತಕ ದೇಶದ ಎಲ್ಲಾ ಭಾಷೆಗಳಲ್ಲಿ ಪ್ರಕಟಗೊಳ್ಳಬೇಕು ಎಂದು ಹೇಳಿದರು.
ಅತಿಥಿ ಗಣ್ಯರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು. ರಮ್ಯಾ ಪ್ರಸಾದ್ ಮತ್ತು ರಾಧಿಕ ಪ್ರಾರ್ಥಿಸಿ, ಲೇಖಕ ಮಾಣಿಪಂಡ ಸಂತೋಷ್ ತಮ್ಮಯ್ಯ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ಸಚಿನ್ ಕಾರ್ಯಕ್ರಮ ನಿರೂಪಿಸಿ, ಡಿ.ಎಸ್ ತಮ್ಮಪ್ಪ ವಂದಿಸಿದರು.