ಸೋಮವಾರಪೇಟೆ, ಆ. 28: ನಿರಂತರ ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿಗೆ ತುತ್ತಾಗುತ್ತಿರುವ ಕೊಡಗು ಜಿಲ್ಲೆಯನ್ನು ರಾಷ್ಟ್ರೀಯ ಪ್ರಕೃತಿ ವಿಪತ್ತು ಪೀಡಿತ ಪ್ರದೇಶ ಎಂದು ಸರಕಾರ ಘೋಷಿಸಬೇಕೆಂದು ತಾಲೂಕು ಕಾಫಿ, ಕರಿಮೆಣಸು ಮತ್ತು ಏಲಕ್ಕಿ ಬೆಳೆಗಾರರ ಹೋರಾಟ ಸಮಿತಿ ಒತ್ತಾಯಿಸಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಲಿಂಗೇರಿ ರಾಜೇಶ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಘಟಿಸಿದ ಭೂ ಕುಸಿತ ಮತ್ತು ಕುಂಭ ದ್ರೋಣ, ಆಶ್ಲೇಷ ಮಳೆಯಿಂದಾಗಿ ಬೆಳೆಗಾರರು ಬೆಳೆದ ಬೆಳೆ ನಷ್ಟವಾಗುವದರೊಂದಿಗೆ, ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದರು.
ಹಿಂದೊಮ್ಮೆ ದಾನ ನೀಡುವ ಕೈಗಳಾಗಿದ್ದ ರೈತರು, ಇಂದು ಜೀವನದ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಜಿಲ್ಲೆಯ ಬೆಳೆಗಾರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವದು ಖಂಡನೀಯ ಎಂದರು. ಸಂಘದ ಉಪಾಧ್ಯಕ್ಷ ಹೂವಯ್ಯ ಮಾತನಾಡಿ, ಸರಕಾರ ಅಡಿಕೆ ಬೆಳೆಯನ್ನು ಆಹಾರ ಬೆಳೆ ಎಂದು ಘೋಷಿಸಿದೆ. ಆದರೆ, ಜಿಲ್ಲೆಯ ಬೆಳೆಗಾರರ ಜೀವನಾಡಿಯಾಗಿರುವ ಕಾಫಿ, ಏಲಕ್ಕಿ ಮತ್ತು ಕರಿಮೆಣಸನ್ನು ವಾಣಿಜ್ಯ ಬೆಳೆ ಎಂದು ಘೋಷಣೆ ಮಾಡಿರುವ ಕ್ರಮ ಸರಿಯಲ್ಲ ಎಂದರು.
ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಪಡೆದಿರುವ ಪಂಪ್ಸೆಟ್ಗೆ ಬಿಲ್ ಪಾವತಿಸಿಲ್ಲ ಎಂದು ಸೆಸ್ಕ್ ಇಲಾಖೆಯವರು ಸಂಪರ್ಕವನ್ನು ಕಡಿತಗೊಳಿಸು ತ್ತಿದ್ದಾರೆ. ಆದರೆ, ರೈತರು ಕುಡಿಯಲು ಹಾಗೂ ದನ-ಕರುಗಳಿಗೆ ನೀರನ್ನು ಬಳಸಬೇಕಾಗಿದ್ದು, ಇಲಾಖೆಯ ನೀತಿಯಿಂದಾಗಿ ಮಳೆಗಾಲದಲ್ಲೂ ಕುಡಿಯುವ ನೀರಿನ ಬವಣೆಯನ್ನು ಎದುರಿಸಬೇಕಾಗಿದೆ ಎಂದು ಆರೋಪಿಸಿದರು.
ಸರಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿರುವ ಕಾಫಿ ಬೆಳೆಗಾರರ ಕೃಷಿಗೆ ಬಳಸುವ 10 ಎಚ್.ಪಿ.ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿರುವದನ್ನು ತಕ್ಷಣ ನಿಲ್ಲಿಸಬೇಕು. ತಪ್ಪಿದಲ್ಲಿ ಸೆಪ್ಟೆಂಬರ್ 9 ರಂದು ಜಿಲ್ಲೆಯ ಎಲ್ಲ ರೈತರ ಸಹಕಾರ ದೊಂದಿಗೆ ಪ್ರತಿಭಟನೆ ನಡೆಸಲಾ ಗುವದು. ಇಲ್ಲಿನ ವಿವೇಕಾನಂದ ವೃತ್ತದಿಂದ ಮೆರವಣಿಗೆಯ ಮೂಲಕ ತೆರಳಿ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಲಾಗುವದು. ನಂತರ ತಾಲೂಕು ಕಚೇರಿಗೆ ತೆರಳಿ ಪ್ರತಿಭಟಿಸಲಾಗುವದು ಎಂದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಡಿ.ಎಸ್. ಚಂಗಪ್ಪ, ಪದಾಧಿಕಾರಿಗಳಾದ ಎಸ್.ಎಂ. ಡಿಸಿಲ್ವ, ಕೆ.ಎಂ. ದಿನೇಶ್ ಉಪಸ್ಥಿತರಿದ್ದರು.