ಕರಿಕೆ, ಆ. 28: ಹಲವು ವರ್ಷಗಳಿಂದ ವೈದ್ಯರಿಲ್ಲದೆ ಸದಾ ಸುದ್ದಿಯಲ್ಲಿದ್ದ ಕರಿಕೆ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯರನ್ನು ನೇಮಿಸಿ ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.ಗ್ರಾಮದಲ್ಲಿ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ವೊಂದು ಕಾರ್ಯ ನಿರ್ವಹಿಸುತಿತ್ತು ತದನಂತರ ದ ದಿನಗಳಲ್ಲಿ ಅದು ಆಯುರ್ವೇದ ಆಸ್ಪತ್ರೆಯಾಗಿ ಮಾರ್ಪಾಡು ಗೊಂಡಿತ್ತು.ಕಳೆದ ಐದಾರು ವರ್ಷಗಳಿಂದ ಖಾಯಂ ವೈದ್ಯರಿಲ್ಲದೆ ವಾರದಲ್ಲಿ ಎರಡುದಿನ ವಿವಿಧ ಕಡೆಗಳಿಂದ ಆಯುರ್ವೇದ ವೈದ್ಯರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಅಲ್ಲದೆ ಅಲೋಪತಿ ಆಸ್ಪತ್ರೆಗೆ ಭಾಗಮಂಡಲ ವೈದ್ಯಾಧಿಕಾರಿಯನ್ನು ಎರಡುದಿನ ಕರ್ತವ್ಯ ಕ್ಕೆ ಆಯೋಜಿಸಿದ್ದರು. ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ ಹಲವಾರು ಕಡೆಗಳಲ್ಲಿ ಆರೋಗ್ಯ ವಿಸ್ತರಣಾ ಕೇಂದ್ರ ವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು.ಅದರಲ್ಲಿ ಕೊಡಗಿನ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಸುನೀಲ್ ಸುಬ್ರಮಣಿ ಅವರು ಗ್ರಾಮಸ್ಥರ ಮನವಿಯ ಮೇರೆಗೆ ಸರಕಾರದ ಮಟ್ಟದಲ್ಲಿ ಒತ್ತಡ ಹಾಕಿದ ಫಲವಾಗಿ ಗಡಿ ಗ್ರಾಮ ಕರಿಕೆಗೂ ಮಂಜೂರಾಗಿತ್ತು. ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು. ಈ ಆರೋಗ್ಯ ವಿಸ್ತರಣಾ ಕೇಂದ್ರ ಓರ್ವ ಎಂ.ಬಿ.ಬಿಸ್. ವೈದ್ಯ, ಒಂದು ಶುಶ್ರೂಷಕಾ ದಾದಿ ಮತ್ತು ಓರ್ವ ಡಿ ಗ್ರೂಪ್ ನೌಕರರನ್ನು ಹಾಗೂ ಪೂರ್ಣ ಪ್ರಮಾಣದ ಔಷಧಿಯನ್ನು ಒಳಗೊಂಡ ಚಿಕಿತ್ಸಾ ಘಟಕವಾಗಿರುತ್ತದೆ.

ಆದರೆ ಗ್ರಾಮೀಣ ಭಾಗ ಹಾಗೂ ಕಡಿಮೆ ವೇತನದ ಕಾರಣವೊಡ್ಡಿ ಯಾವ ವೈದ್ಯರು ಕರ್ತವ್ಯ ಕ್ಕೆ ಹಾಜರಾಗಲು ಸಿದ್ದರಿರಲಿಲ್ಲ. ಓರ್ವ ದಾದಿ ಹಾಗೂ ಡಿ ಗ್ರೂಪ್ ನೌಕರ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಹಲವಾರು ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಗಂಭೀರವಾಗಿ ಚರ್ಚೆ ನಡೆಸಿ ವೈದ್ಯರ ನೇಮಕಕ್ಕೆ ಕ್ರಮ ವಹಿಸುವಂತೆ ನಿರ್ಣಯ ಕೈಗೊಳ್ಳುತ್ತಿದ್ದರು. ಆದರೆ ವೈದ್ಯರ ನೇಮಕಾತಿ ಆಗದೆ ಆ ನಿರ್ಣಯ ಕೇವಲ ಪುಸ್ತಕಕ್ಕೆ ಸೀಮಿತವಾಗಿತ್ತು.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಯಾವದೇ ವೈದ್ಯರು ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಕೇಂದ್ರದಿಂದ ಎಪ್ಪತ್ತು ಕಿ.ಮೀ. ದೂರಲ್ಲಿರುವ ಕರಿಕೆ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ತೋರುತ್ತಿಲ್ಲ.

ತಾವು ಗ್ರಾಮದಲ್ಲಿ ವೈದ್ಯಕೀಯ ಸೇವೆ ನೀಡಲು ತಯಾರಿರುವ ಯಾವದೇ ಎಂ.ಬಿ.ಬಿ.ಎಸ್. ವೈದ್ಯರನ್ನು ಗುರುತಿಸಿ ನನ್ನ ಗಮನಕ್ಕೆ ತಂದಲ್ಲಿ ತಾನು ಕರ್ತವ್ಯಕ್ಕೆ ನೇಮಕಾತಿ ಮಾಡಿ ಆದೇಶ ಹೊರಡಿಸುವದಾಗಿ ತಿಳಿಸಿದ್ದರು. ಇದರಂತೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೂಡಂಗಲ್ ತಾಲೂಕು ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಡೆಂಗ್ಯು ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಬೆಳಗಾಂ ಮೂಲದ ಡಾ. ಪುಂಡಲೀಕ ಎಂಬ ವೈದ್ಯರೊಬ್ಬರು; ಅಲ್ಲಿಗೆ ತಮ್ಮ ಪುತ್ರ ಡೆಂಗ್ಯು ಜ್ವರ ಭಾದಿತರಾಗಿ ಚಿಕಿತ್ಸೆಗೆ ತೆರಳಿದ ಮಾಜಿ ಗ್ರಾ.ಪಂ. ಸದಸ್ಯ ಹೊಸಮನೆ ಬಲರಾಂಗೆ ಪರಿಚಿತವಾಗಿದೆ, ತಾವು ಕರ್ನಾಟಕದ ಗಡಿ ಗ್ರಾಮ ಕರಿಕೆಯಲ್ಲಿ ವಾಸವಿದ್ದು, ಇಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಲಭಿಸುತ್ತಿಲ್ಲ ಬಡ ರೋಗಿಗಳಿದ್ದು, ಕೇರಳ ಅಥವಾ ದ.ಕ. ಜಿಲ್ಲೆಯ ಆಸ್ಪತ್ರೆಯನ್ನು ಅವಲಂಭಿಸಬೇಕಾಗಿದೆ ಅಲ್ಲದೇ ಖಾಯಂ ವೈದ್ಯರಾಗಿ ಬರಲು ಯಾರೂ ಬರುತ್ತಿಲ್ಲ ಎಂಬ ಸಮಸ್ಯೆಯನ್ನು ವೈದ್ಯರಿಗೆ ಮನವರಿಕೆ ಮಾಡಿದಾಗ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಲ್ಲಿ ಕರಿಕೆ ಆರೋಗ್ಯ ವಿಸ್ತರಣ ಕೇಂದ್ರಕ್ಕೆ ವೈದ್ಯರಾಗಿ ಬರಲು ಆಸಕ್ತಿ ತೋರಿದ್ದರು.

ವಿಷಯವನ್ನು ಬಲರಾಂ ಅವರು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ಬಾಲಚಂದ್ರ ನಾಯರ್ ಗಮನಕ್ಕೆ ತಂದು ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ ಅವರಿಗೆ ಡಾ. ಪುಂಡಲೀಕ ಅವರನ್ನು ಭೇಟಿ ಮಾಡಿಸಿ ಆರೋಗ್ಯ ಅಧಿಕಾರಿಗಳು ನಂತರ ಜಿಲಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಾಗ ವೈದ್ಯರನ್ನು ಕರಿಕೆ ಆರೋಗ್ಯ ವಿಸ್ತರಣ ಕೇಂದ್ರಕ್ಕೆ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು ಇವರ ವೇತನವನ್ನು ಜಿಲ್ಲಾಡಳಿತ ಭರಿಸಲಿದ್ದು, ಜಿಲ್ಲಾಧಿ ಕಾರಿಗಳ ಈ ಕಾಳಜಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಪ್ರಸ್ತುತ ನೇಮಕಾತಿ ಗೊಂಡಿರುವ ವೈದ್ಯರು ಡೆಂಗ್ಯು ಕಾಯಿಲೆಯ ವಿಶೇಷ ವೈದ್ಯರಾಗಿ ಪರಿಣಿತಿ ಪಡೆದಿದ್ದು ಎಳ್ಳುಕೊಚ್ಚಿ ಆರೋಗ್ಯ ಕೇಂದ್ರದಲ್ಲಿ ವಾರದ ಭಾನುವಾರ ಹಾಗೂ ಸರಕಾರಿ ರಜಾ ದಿನವನ್ನು ಹೊರತುಪಡಿಸಿ ಉಳಿದ ದಿನಗಳು ಬೆಳಿಗ್ಗೆಯಿಂದ ಸಂಜೆ ತನಕ ರೋಗಿಗಳಿಗೆ ಚಿಕಿತ್ಸೆಗೆ ಲಭ್ಯವಿ ರುವದಾಗಿ ಮತ್ತು ಅಗತ್ಯ ಔಷಧಿಗಳನ್ನು ಕೂಡ ಸರಬರಾಜು ಮಾಡಿರುವದಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಮೋಹನ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

- ಹೊದ್ದೆಟ್ಟಿ ಸುಧೀರ್