ಚೆಟ್ಟಳ್ಳಿ, ಆ. 27: ಅನಾರೋಗ್ಯದ ಕಾರಣ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ಧೆಯನ್ನು ಕುಶಾಲನಗರದ ಯುವಕರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕುಶಾಲನಗರದ ಗೋಪಾಲ್ ಸರ್ಕಲ್ ನಿವಾಸಿ ರತ್ನಮ್ಮ (60) ಎಂಬವರು ರಸ್ತೆ ಬದಿಯಲ್ಲಿ ಅನಾರೋಗ್ಯದಿಂದ ನರಳಾಡುತ್ತಿದ್ದುದನ್ನು ಕಂಡು ಕುಶಾಲನಗರದ ನಿವಾಸಿ ಮೈಸಿ ಹಾಗೂ ಆಟೋಚಾಲಕ ಸಿದ್ದು ಎಂಬವರು ತಕ್ಷಣ ವೃದ್ದೆಯನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಅನಾಥರಾದ ರತ್ನಮ್ಮ ಅವರು ರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವದನ್ನು ಕಂಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯವನ್ನು ವಿಚಾರಿಸಲು ಯಾರೂ ಇಲ್ಲದ ಕಾರಣ ರತ್ನಮ್ಮನ ಆರೋಗ್ಯ ತೀರಾ ಹದಗೆಟ್ಟಿದ್ದು, ಹೆಚ್ಚಿನ ಚಿಕಿತ್ಸೆ ನೀಡಬೇಕಾಗಿದೆ. ಸಂಘ ಸಂಸ್ಥೆಗಳು ಈ ವೃದ್ಧೆಗೆ ಸಹಾಯ ಮಾಡಬೇಕಾಗಿದೆ ಎಂದÀು ಯುವಕರು ಹೇಳಿದರು.