ಕೂಡಿಗೆ, ಆ. 27: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲಿಯೇ ಗ್ರಾ.ಪಂ. ಸದಸ್ಯರಾದ ಕೆ.ವೈ. ರವಿ, ಟಿ.ಕೆ. ವಿಶ್ವನಾಥ್, ರಾಮಚಂದ್ರ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ನಂತರ ಸಭಾತ್ಯಾಗ ಮಾಡಿ ಸಭೆಯಿಂದ ಹೊರನಡೆದರು.

ತಮ್ಮ ವಾರ್ಡ್‍ಗಳಿಗೆ ಸಂಬಂಧಪಟ್ಟ ಯಾವ ವಿಚಾರವನ್ನು ತಿಳಿಸಿದರೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸ್ಪಂದಿಸುತ್ತಿಲ್ಲ ಹಾಗೂ ಕಾಮಗಾರಿಗಳ ಬಗ್ಗೆ ಮತ್ತು ಮೂಲಭೂತ ಸೌಕರ್ಯಗಳನ್ನು, ಈಗಾಗಲೇ ಜಲಾವೃತಗೊಂಡ ಪ್ರದೇಶಗಳ ಸ್ವಚ್ಛತೆ ಕೈಗೊಳ್ಳುವದರ ಬಗ್ಗೆ ತಿಳಿಸಿದರೂ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಮಾಸಿಕ ಸಭೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಕೆ.ವೈ. ರವಿ, ಕೃಷ್ಣ, ಕೆ.ಬಿ. ರಾಮಚಂದ್ರ, ರತ್ನಮ್ಮ, ಪುಷ್ಪ, ಜಯಶ್ರೀ, ಟಿ.ಕೆ. ವಿಶ್ವನಾಥ್, ಕೆ.ಜೆ. ಮಂಜಯ್ಯ, ಕೆ.ಎ. ದಸ್ವಿ ಇವರು ಸಭೆಯಿಂದ ಹೊರ ನಡೆದ ಹಿನ್ನೆಲೆ ಸಭೆಯನ್ನು ಮುಂದೂಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ ಸದಸ್ಯರ ಅಭಿಪ್ರಾಯವನ್ನು ಕಳೆದ ಮಾಸಿಕ ಸಭೆಗಳಲ್ಲಿ ಸಂಗ್ರಹಿಸಿಕೊಂಡು ಅದರನ್ವಯ ಆಯಾ ವಾರ್ಡ್‍ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಇದ್ದಕ್ಕಿದ್ದಂತೆ ಸಭೆ ಪ್ರಾರಂಭಗೊಂಡ ತಕ್ಷಣ 9 ಮಂದಿ ಸದಸ್ಯರು ಸಭಾತ್ಯಾಗ ಮಾಡಿರುವದು ಸರಿಯಲ್ಲ. ಸಭೆಯಲ್ಲಿ ಚರ್ಚಿಸಿ ಅಭಿವೃದ್ಧಿ ಅಧಿಕಾರಿಗೆ ಕೆಲಸ ಮಾಡುವಂತೆ ಸೂಚನೆ ಮಾಡಬಹುದಿತ್ತು. ಆದರೆ, ಸದಸ್ಯರು ಸಭಾತ್ಯಾಗ ಮಾಡಿದ್ದರಿಂದ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ತಡವಾಗುತ್ತಿದೆ ಎಂದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷರ ಮತ್ತು ಸದಸ್ಯರ ಅಭಿಪ್ರಾಯದಂತೆ ಮಾಸಿಕ ಸಭೆಯ ತೀರ್ಮಾನದಂತೆ ಕಾರ್ಯನಿರ್ವಹಿಸು ತ್ತಿದ್ದೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವದೇ ಕಾರ್ಯ ನಿರ್ವಹಿಸಲು ಸದಸ್ಯರ ಅನುಮತಿ ಪಡೆದು ನಿರ್ವಹಿಸಬೇಕು ಎಂದು ಹೇಳುವದರ ಮೂಲಕ ಸಭೆಯಿಂದ ಹೊರ ನಡೆದಿದ್ದಾರೆ. ನಾವು ನಿಯಮಾ ನುಸಾರ ಗ್ರಾ.ಪಂ. ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.