ವಿದ್ಯಾರ್ಥಿಗಳಿಗೆ ಸಾಂತ್ವನ

ಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿಯಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ಮಕ್ಕಳಿಗೆ ಸಾಂತ್ವನಾ ಮತ್ತು ಪರಿಹಾರ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಅಪ್ಪಾಜಿಗೌಡ ಇತ್ತೀಚೆಗೆ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣವಾಗಿ ಮನೆಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಪರಿಹಾರ ಕಿಟ್‍ಗಳನ್ನು ವಿತರಿಸಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಚಿತ್ರಾ.ವೈ., ಪ್ರೊ ಶಶಿಧರ್ , ಡಾ.ದಯಾನಂದ ಮತ್ತು ಪ್ರೊ.ಪ್ರಕಾಶ ಪ್ರಾಕೃತಿಕ ವಿಕೋಪದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಮನೆಗೆ ತೆರಳಿ ಕಾಲೇಜಿನ ವತಿಯಿಂದ ಪರಿಹಾರ ನೀಡಿ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಾಂತ್ವನವನ್ನು ಹೇಳಿದರು.

ಶಾಸಕರಿಂದ ನೆರವು

ನಾಪೆÇೀಕ್ಲು : ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದವಾಡ ಗ್ರಾಮದಲ್ಲಿ ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾಗಿ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಕುಟುಂಬದವರಿಗೆ ಸರಕಾರದಿಂದ ಒಂದು ಕುಟುಂಬಕ್ಕೆ 10 ಸಾವಿರ ರೂ. ಗಳಂತೆ ಒಟ್ಟು 16,80,000 ಮೊತ್ತವನ್ನು ಕ್ಷೇತ್ರದ ಶಾಸಕ ಮಂಡೇಪಂಡ ಅಪ್ಪಚ್ಚು ರಂಜನ್ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ನಿರಾಶ್ರಿರೊಂದಿಗೆ ನಮ್ಮ ಸರಕಾರ ಸದಾ ಇರುವದಾಗಿ ತಿಳಿಸಿದರು. ಈ ಸಂದರ್ಭ ಶಾಸಕರೊಂದಿಗೆ ಜಿಲ್ಲಾ ಪಂಚಾಯತ್ ಸದಸ್ಯ ಮುರುಳಿಧರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಪಿ. ದಿನೇಶ್, ಸದಸ್ಯರುಗಳಾದ ಹೆಚ್.ಎ. ಹಂಸ, ಅಕ್ಕವ್ವ, ಶಾಫಿ, ನಂದ, ಲಲಿತಾ, ಉಮೇಶ್. ಭಾರತಿ, ಗ್ರಾ.ಪಂ. ಪಿ.ಡಿ.ಓ. ಅಬ್ದುಲ್ಲ ಮತ್ತು ಗ್ರಾಮಸ್ಥರು ಇದ್ದರು.

ಜಿ.ಪಂ. ಅಧ್ಯಕ್ಷರಿಂದ ನೆರವು

ಮಡಿಕೇರಿ : ಬಿಳಿಗೇರಿ ಗ್ರಾಮದ ಬಕ್ಕಾಬಾಣೆ ನಿವಾಸಿಗಳಿಗೆ ಮತ್ತು ಅರ್ವತೋಕ್ಲು ಗ್ರಾಮದ ಪುತ್ತರೀರ ಕುಟುಂಬಸ್ಥರಿಗೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಪ್ರಕೃತಿ ವಿಕೋಪದಡಿಯಲ್ಲಿ ಹಾನಿಯಾದ ಕುಟುಂಬಸ್ಥರಿಗೆ ಪರಿಹಾರವಾಗಿ ರೂ. 10,000ದ ಚೆಕ್ಕನ್ನು ಮತ್ತು ಕಿಟ್ ಅನ್ನು ಕೊಡಗು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಬಿ.ಎ. ಹರೀಶ್ ತಮ್ಮ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಂಚಾಯಿತಿ ಸದಸ್ಯರುಗಳಾದ ಕುಮುದ, ಉಮಾಪ್ರಭು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭೀಮಯ್ಯ, ಸದಸ್ಯ ಪಿ. ರಕ್ಷಿತ್, ಕಂದಾಯ ಪರಿವೀಕ್ಷಕ ಸದಾನಂದ ಮತ್ತು ಎಂ.ಬಿ. ಜೋಯಪ್ಪ ಹಾಗೂ 12 ಕುಟುಂಬದ ಸದಸ್ಯರು ಭಾಗಿಯಾಗಿದ್ದರು.

ರೆಡ್‍ಕ್ರಾಸ್ ಕೊಡುಗೆ

ನಾಪೋಕ್ಲು: ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕೊಡಗು ಶಾಖೆ ವತಿಯಿಂದ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೆರೆಸಂತ್ರಸ್ತರಿಗೆ ಬೆಡ್‍ಶೀಟ್ ಹಾಗೂ ಕಂಬಳಿಗಳನ್ನು ವಿತರಿಸಲಾಯಿತು. ಸಂಸ್ಥೆಯ ಪ್ರಥಮ ಚಿಕಿತ್ಸಾ ವಿಭಾಗದ ಅಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಸಂತ್ರಸ್ತರಿಗೆ ಬೆಡ್‍ಶೀಟ್ ಹಾಗೂ ಕಂಬಳಿಗಳನ್ನು ವಿತರಿಸಿದರು.

ಕುಶಾಲನಗರ: ಭಾರೀ ಮಳೆಯಿಂದ ಹಾನಿಗೊಳಗಾದ ಕುಶಾಲನಗರ ಮೂಲದ ಸಂತ್ರಸ್ತರಿಗೆ ಆರ್ಮಡ್ ಕೇರ್ ಸಂಸ್ಥೆಯಿಂದ ಅಗತ್ಯ ವಸ್ತುಗಳನ್ನು ಸಂಘದ ಸದಸ್ಯ ಕರ್ನಲ್ ಅಯ್ಯಪ್ಪ ಮೂಲಕ ವಿತರಿಸಲಾಯಿತು.

ನಂಜರಾಯಪಟ್ಟಣ

ಗೋಣಿಕೊಪ್ಪ: ನವಚೈತನ್ಯ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇತ್ತೀಚೆಗೆ ಸುರಿದ ಮಳೆಯಿಂದ ಸಂತ್ರಸ್ತರಾದ ನಂಜರಾಯಪಟ್ಟಣ ಹಾಗೂ ವಾಲ್ನೂರು ಭಾಗದ 50 ಕುಟುಂಬಗಳಿಗೆ ಬಟ್ಟೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಸಮಾಜದ ಅಧ್ಯಕ್ಷ ಪ್ರೇಮಾನಂದ, ಸಚಿನ್ ಕುಞ್ಞಪ್ಪ, ಸುಜಿತ್ ರೇಣುಕಾ, ಸವಿನ್ ಹಾಗೂ ವಿಜಯನ್ ಇದ್ದರು.

ತೋರಾದಲ್ಲಿ ನೆರವು

ವೀರಾಜಪೇಟೆ: ಇತ್ತೀಚೆಗೆ ಭಾರೀ ಭೂಕುಸಿತಕ್ಕೀಡಾಗಿರುವ ತೋರ ಗ್ರ್ರಾಮಕ್ಕೆ ಇಂಡಿಯನ್ ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಧಿಕಾರಿ ವರ್ಗ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೆಂಗಳೂರು ವಲಯದ ವತಿಯಿಂದ ಸಂತ್ರಸ್ತರಿಗೆ ಪರಿಹಾರ ಕಿಟ್‍ಗಳನ್ನು ವಿತರಿಸಲಾಯಿತು. ಶಾಖಾ ವ್ಯವಸ್ಥಾಪಕಿ ಶಿಲ್ಪ ಭಂಡಾರ್‍ಕರ್, ಅಧಿಕಾರಿಗಳಾದ ಚಂದ್ರಶೇಖರ್, ಸಿಬ್ಬಂದಿ ಆನಂದ್ ಹಾಗೂ ಪಿ.ಎಂ. ಶರೀಫ್ ತಂಡದಲ್ಲಿದ್ದರು. ಕೆದಮುಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಚೋಂದಮ್ಮ ಈ ಸಂದರ್ಭದಲ್ಲಿ ಹಾಜರಿದ್ದರು.

ಗೋಣಿಕೊಪ್ಪಲು: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮದಿಂದ ಆಗಮಿಸಿದ ಯುವಕರು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಹೆಚ್. ಗುರು ಅಭಿಮಾನಿ ಬಳಗದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ನೆರೆ ಹಾವಳಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೂರಾರು ಕಿಟ್‍ಗಳನ್ನು ವಿತರಿಸಿದರು.

ವೀರ ಯೋಧ ಹೆಚ್. ಗುರು ಅಭಿಮಾನಿ ಬಳಗದ ಬಿಗ್ ಪ್ರಿಂಟರ್ಸ್ ಮಾಲೀಕ ಮಧು ಮುಂದಾಳತ್ವದಲ್ಲಿ ಆಗಮಿಸಿದ ಯುವಕರು ಸಿದ್ದಾಪುರ ಸಮೀಪದ ವಾಲ್ನೂರು, ತ್ಯಾಗತ್ತೂರು, ದುಬಾರೆ ಭಾಗದಲ್ಲಿ ನೆರೆ ಹಾವಳಿಗೆ ಸಿಲುಕಿ ತೊಂದರೆಯಲ್ಲಿದ್ದ ಸಂತ್ರಸ್ತರನ್ನು ಮಾತನಾಡಿಸಿ ಸಾಮಗ್ರಿಗಳನ್ನು ವಿತರಿಸಿದರು.

ಈ ತಂಡದಲ್ಲಿ ಪಿ.ಎ. ಮಂಜುನಾಥ, ಅರುಣ್ ಎಂ., ಬೋರೇಗೌಡ, ಎನ್.ಬಿ. ಬಸವರಾಜ್ ಗುರುದರ್ಶನ್, ಹೊಟೇಲ್ ಅಭಿ, ಭಾರತ್ ಗ್ಯಾಸ್ ಶಿವಕುಮಾರ್, ನಿತಿನ್, ಯೋಗೇಶ್ ನಾಯ್ಡು, ಮುಂತಾದವರು ಹಾಜರಿದ್ದರು.

ಗುಡ್ಡೆಹೊಸೂರು: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧ ಮಂಡ್ಯದ ಕೆ.ಆರ್. ದೊಡ್ಡಿಯ ನಿವಾಸಿ ಗುರು ಹೆಚ್. ಅವರ ಸಹೋದರ ಮಧು ಮತ್ತು ಅವರ ಗೆಳೆಯರು ಸೇರಿ ಕೊಡಗಿನ ಹಲವು ಭಾಗಗಳಲ್ಲಿ ನಿರಾಶ್ರಿತರಾದ ಕುಟುಂಬಗಳಿಗೆ ಆಹಾರದ ಕಿಟ್ಟನ್ನು ವಿತರಿಸಿದರು. ತಂಡದಲ್ಲಿ ಅರುಣ್, ಅಭಿ, ಬಸವರಾಜ್, ಮಧು, ಶಿವು ಮುಂತಾದವರು ಹಾಜರಿದ್ದರು.