ಮಡಿಕೇರಿ, ಆ. 26: ಪ್ರತಿನಿತ್ಯ ದರೋಡೆ, ಕಳ್ಳತನ, ಕೊಲೆ-ಸುಲಿಗೆಗಳ ಸುದ್ದಿಗಳು ಸರ್ವೇ ಸಾಮಾನ್ಯವಾಗಿರುವ ಈ ಕಲಿಯುಗದಲ್ಲಿ ಪ್ರಾಮಾಣಿಕತೆಯ ಸುದ್ದಿ ಅಚ್ಚರಿ ತರುತ್ತದೆ.

ಶನಿವಾರದಂದು ಸಂಜೆ 4.30ರ ಸಮಯಕ್ಕೆ ಮೈಸೂರಿನಿಂದ ಹೊರಟ ಕೆಎಸ್‍ಆರ್‍ಟಿಸಿ ಬಸ್ ಅನ್ನು ಪ್ರಯಾಣಿಕರಾದ ಷಂಶುದ್ದೀನ್ ಅವರು ಗೋಣಿಕೊಪ್ಪಲಿನಲ್ಲಿ ಹತ್ತಿದರು. ಇವರು ಹತ್ತುವ ವೇಳೆಗೆ ಇನ್ನೊಬ್ಬರು (ಬಹುಶಃ ಮೈಸೂರಿನಿಂದ ಪ್ರಯಾಣಿಸುತ್ತಿದ್ದವರು) ಗೋಣಿಕೊಪ್ಪದಲ್ಲಿ ಇಳಿದರು. ಇವರ ಜಾಗದಲ್ಲಿ ಷಂಶುದ್ದೀನ್ ಕುಳಿತುಕೊಳ್ಳಲು ತೆರಳಿದಾಗ ಅವರಿಗೆ ಸೀಟಿನ ಮೇಲೆ ನಗದು ಹಣ ದೊರೆತಿದೆ.

ಗೋಣಿಕೊಪ್ಪದಲ್ಲಿ ಇಳಿದುಕೊಂಡ ಪಯಾಣಿಕನಿಗೆ ಹಿಂದಿರುಗಿಸಲು ತೆರಳುವಷ್ಟರಲ್ಲಿ ಬಸ್ ಮುಂದೆ ತೆರಳಿತು. ಇವರೂ ಅಲ್ಲಿಂದ ತೆರಳಿದರು. ಮುಂದೆ ಸಾಗಿದ ಗೋಣಿಕೊಪ್ಪದ ಮಳಿಗೆಯೊಂದರಲ್ಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಷಂಶುದ್ದೀನ್ ಸೋಮವಾರ ಶಕ್ತಿ ಕಾರ್ಯಾಲಯಕ್ಕೆ ಕರೆ ಮಾಡಿ, ನಗದು ಕಳೆದುಕೊಂಡವರು ತಮ್ಮ ದೂರವಾಣಿಗೆ ಕರೆ ನೀಡಿ ಸೂಕ್ತ ಮಾಹಿತಿ ನೀಡಿ ಹಣ ಪಡೆದುಕೊಳ್ಳಬಹುದು ಎಂದರಲ್ಲದೆ, ನನಗೆ ಈ ವ್ಯಕ್ತಿಯ ಮುಖ ಪರಿಚಯವೂ ಇದೆ ಎಂದು ತಿಳಿಸಿದರು.

ಒಂದು ವೇಳೆ ಈ ವ್ಯಕ್ತಿ ಕರೆ ಮಾಡದಿದ್ದಲ್ಲಿ ಅವರು ಹಣವನ್ನು ಬಡವರಿಗೆ ಹಂಚುವದಾಗಿಯೂ ತಿಳಿಸಿದರು. ಇವರ ಪ್ರಾಮಾಣಿಕತೆಯನ್ನು ದುರುಪಯೋಗಿಸದೆ, ಹಣ ಕಳೆದುಕೊಂಡವರು ಈ ಮೊಬೈಲ್ 9483780336 ಸಂಖ್ಯೆಗೆ ಕರೆ ಮಾಡಬಹುದು.