ಕಣಿವೆ, ಆ. 26: ವಿವಾಹಿತ ಯುವತಿಯೊಬ್ಬಳಿಗೆ ಆಟೋ ಚಾಲಕನೋರ್ವ ಕಳೆದ ಎರಡು ವರ್ಷಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ಅಪಹರಣ ಮಾಡಿದ್ದಾನೆ ಎಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿರುವ ಪ್ರಸಂಗ ಸೋಮವಾರ ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಸೋಮವಾರಪೇಟೆ ಬಳಿಯ ಗೌಡಳ್ಳಿಯ ನಿವಾಸಿಯೋರ್ವರು ಅದೇ ಗ್ರಾಮದ ಆಟೋ ಚಾಲಕ ರಘು ಎಂಬಾತ ತಮ್ಮ ಪತ್ನಿ ( ಹೆಸರು ಬದಲಿಸಲಾಗಿದೆ) ಪಂಕಜ ಎಂಬವರನ್ನು ಅಪಹರಿಸಿದ್ದಾನೆ ಎಂದು ಆಕೆಯ ಕೈ ಹಿಡಿದು ಎಳೆ ದೊಯ್ಯುತ್ತಿರುವ ಸಿಸಿ ಕ್ಯಾಮೆರಾದ ಫೂಟೇಜ್ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದಂಪತಿ ವಿವಾಹವಾಗಿ 13 ವರ್ಷಗಳಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಗೌಡಳ್ಳಿ ನಿವಾಸಿಯಾದ ದೂರುದಾರ ಪತಿ ಅದೇ ಊರಿಗೆ ಸಮೀಪದ ಮತ್ತೊಂದು ಗ್ರಾಮದ 30 ರ ವಯೋಮಾನದ ಯುವತಿ ಯೊಂದಿಗೆ ವಾಸವಿದ್ದು, ಕೃಷಿ ಮಾಡುತ್ತಿದ್ದರು ಎನ್ನಲಾಗಿದೆ. ದೂರುದಾರ ಪತಿ ತನ್ನ ಪತ್ನಿಯನ್ನು ಅಲ್ಲೇ ಸಮೀಪದ ಆಕೆಯ ತೋಟ ವನ್ನು ನೋಡಲು ಗೌಡಳ್ಳಿಯಲ್ಲಿನ ರಘು ಎಂಬಾತನ ಆಟೋವನ್ನು ದಿನಂಪ್ರತಿ ಲೆಕ್ಕಾಚಾರದಲ್ಲಿ ನಿಗದಿಗೊಳಿಸಿಕೊಂಡಿದ್ದನು. ದಿನಗಳು ಕಳೆದಂತೆ ಇವರಿಬ್ಬರ ಪರಿಚಯ ಪ್ರೇಮಾಂಕುರಕ್ಕೆ ತಿರುಗಿದ್ದು, ಆಗಾಗ್ಗೆ ಅಲ್ಲಲ್ಲಿ ಅಡ್ಡಾಡುತ್ತಿದ್ದ ವಿಚಾರ ಆಕೆಯ ಪತಿಗೆ ತಿಳಿದಿದೆ.

ನಂತರ ಪತಿ ನಮಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿನಗೆ ಈಗ ಆತನ ಜೊತೆ ಒಡನಾಟ ಬೇಕಾ ...? ಬೇಡ ಬಿಟ್ಟು ಬಿಡು ಎಂದು ಬುದ್ಧಿ ಮಾತು ಹೇಳಿ, ಆಟೋ ಚಾಲಕನಿಗೂ ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ ಅವಿವಾಹಿತ ಆಟೋ ಚಾಲಕ ಆಕೆಯ ಒಡನಾಟವನ್ನು ಬಿಟ್ಟಿರ ಲಾರದೇ ಆಗಿಂದಾಗ್ಗೆ ಆಕೆಯನ್ನು ಹೆದರಿಸಿ, ಬೆದರಿಸಿ ಕೊಲೆ ಮಾಡುವದಾಗಿಯೂ ಕಿರುಕುಳ ನೀಡುತ್ತಿದ್ದ ಎಂದು ಪತಿ ದೂರಿದ್ದಾನೆ.

ಕಳೆದ ಒಂದು ವರ್ಷದ ಹಿಂದೆ ಮತ್ತೆ ಆಕೆಯನ್ನು ಮಡಿಕೇರಿಯ ಹೋಮ್ ಸ್ಟೇ ಒಂದಕ್ಕೆ ಕರೆದೊಯ್ದ ಆಟೋ ಚಾಲಕ, ಅಲ್ಲಿ ನಾಲ್ಕು ದಿನ ಆಕೆಯನ್ನು ಕೂಡಿಟ್ಟು ಫೋನ್ ಸಂಪರ್ಕ ಕೂಡ ನೀಡದೇ ಬಂಧನದಲ್ಲಿರಿಸಿದ್ದ. ಬಳಿಕ ಆತನ ಕಣ್ತಪ್ಪಿಸಿ ನನಗೆ ನನ್ನ ಪತ್ನಿ ಪೋನ್ ಮಾಡಿ ಬಂಧಿಸಿಟ್ಟಿದ್ದ ವಿಳಾಸ ಹೇಳಿದ ಮೇಲೆ ನಾನೇ ಹೋಗಿ ಕರೆದುಕೊಂಡು ಬಂದಿದ್ದೆ. ಮತ್ತೆ ಕೆಲವು ದಿನ ಕÀಳೆದಂತೆ ಗೌಡಳ್ಳಿಯ ಮನೆಯ ಬಳಿಯೇ ಬಂದು ಮನೆಯಲ್ಲಿದ್ದಾಗ ತನ್ನೊಂದಿಗೆ ತಂದಿದ್ದ ದೊಣ್ಣೆಯಿಂದ ನಾನು ಮತ್ತು ನನ್ನ ಮಕ್ಕಳೆದುರೇ ನನ್ನ ಪತ್ನಿಗೆ ಹೊಡೆದು ಕರೆದೊಯ್ದ. ನಾನು ಬಿಡಿಸಿಕೊಳ್ಳಲು ಹೋದಾಗ ನಮ್ಮಿಬ್ಬರನ್ನು ಕೊಲೆ ಮಾಡುವದಾಗಿ ಹೆದರಿಸಿದ.

ನಂತರ ಮಕ್ಕಳು ಮತ್ತು ನನಗಾಗಿ ಹೆದರಿ ನನ್ನಾಕೆ ಅವನೊಂದಿಗೆ ಜೀವ ಭಯದಿಂದ ಹೋದಳು ಎಂದು ಆಕೆಯ ಪತಿ ಕಣ್ಣೀರಿಟ್ಟು ವಿವರಿಸುತ್ತಿದ್ದ ರೀತಿ ಆತನ ಅಸಹಾಯಕತೆಯನ್ನು ಬಿಂಬಿಸುವಂತಿತ್ತು. ಈ ಬಗ್ಗೆ ಶನಿವಾರಸಂತೆಯ ಪೊಲೀಸ್ ಠಾಣೆಗೆ ಕಳೆದ ವರ್ಷ ದೂರು ನೀಡಿದ್ದರೂ ಏನೂ ಪ್ರಯೋಜನ ಆಗಲಿಲ್ಲ ಎಂದು ಆಕೆಯ ಪತಿ ಹೇಳುತ್ತಾರೆ.

ಕೊನೆಗೆ ಕುಟುಂಬದ ಗೌರವಕ್ಕೆ ಹೆದರಿದ ಈ ದಂಪತಿಗಳು ಕಳೆದ ಮೂರು ತಿಂಗಳ ಹಿಂದಷ್ಟೇ ಮಕ್ಕ ಳೊಂದಿಗೆ ಗೌಡಳ್ಳಿಯನ್ನು ತೊರೆದು ಕುಶಾಲನಗರ ಪಟ್ಟಣದಲ್ಲಿ ಬಾಡಿಗೆಗೆ ಮನೆಯೊಂದನ್ನು ಮಾಡಿ, ಮಕ್ಕಳನ್ನು ಅವರ ಊರಿನ ಶಾಲೆಯಿಂದ ಬಿಡಿಸಿ ತಂದು ಕುಶಾಲನಗರದ ಕಾನ್ವೆಂಟ್ ಒಂದರಲ್ಲಿ ದಾಖಲಿಸಿದ್ದಾರೆ. ಆತ ಜೀವನೋಪಾಯಕ್ಕಾಗಿ ಪಟ್ಟಣದ ಹೊಟೇಲ್ ಒಂದರಲ್ಲಿ ಕೆಲಸ ಮಾಡಿದರೆ, ಆಕೆ ಪೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ತಾ. 24ರಂದು ಬೆಳಗ್ಗೆ ಆಕೆ ಕೆಲಸಕ್ಕೆ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದಾಗ, ಕಚೇರಿಯೊಳಗೆ ದಾವಿಸಿದ ಆಟೋ ಚಾಲಕ ಆಕೆಯ ಕೈ ಹಿಡಿದು ಕರೆದೊಯ್ಯುತ್ತಿರುವ ಚಿತ್ರಣ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಕುಶಾಲನಗರ ಠಾಣೆಗೆ ದೂರು ನೀಡಲಾಗಿದೆ. ನನ್ನ ಪತ್ನಿ ಒಳ್ಳೆಯವಳು. ಆಕೆಯನ್ನು ಹೊಡೆದು, ಬಡಿದು ಹೆದರಿಸಿ ನಮ್ಮಿಬ್ಬರನ್ಮು ಕೊಲೆ ಮಾಡುವದಾಗಿ ಹೆದರಿಸಿ ಈ ರೀತಿ ರಘು ಎಂಬಾತ ತೊಂದರೆ ಕೊಡುತ್ತಿದ್ದಾನೆ. ನೀನು ಒಂದು ವೇಳೆ ಪೊಲೀಸರಿಗೆ ದೂರು ಕೊಟ್ಟು ನಾನು ಜೈಲಿಗೆ ಹೋಗುವ ಪ್ರಸಂಗ ಬಂದಲ್ಲಿ, ಜೈಲಿಂದ ಬಂದು ನಿನ್ನನ್ನು ಕೊಲ್ಲುವದಾಗಿ ಹೆದರಿಸಿದ್ದಾನೆ.

ಕಳೆದ ಕೆಲವು ದಿನಗಳ ಹಿಂದೆ ನನ್ನ ಪತ್ನಿ ನನ್ನೊಂದಿಗೆ ಮಾತನಾಡುತ್ತಾ, ಮತ್ತೊಮ್ಮೆ ಆ ಕಿರಾತಕ ರಘು ನನ್ನನ್ನು ಅಪಹರಿಸಿ ದರೆ ನನ್ನನ್ನು ಬದುಕಿಸುತ್ತಾನೋ ಇಲ್ಲವೋ ಗೊತ್ತಿಲ್ಲ ಎನ್ನುತ್ತಿದ್ದಳು ಸರ್, ಪ್ಲೀಸ್ ಎಲ್ಲಿದ್ದಾಳೆ ಹುಡುಕಿ ಕೊಡಿ ಸರ್ ಎಂದು ಆಕೆಯ ಪತಿ ಪೊಲೀಸರ ಬಳಿ ಅಂಗಲಾಚುತ್ತಿ ದ್ದದ್ದು ಕಂಡು ಬಂತು. ಪೊಲೀಸರು ಆತನ ಮೊಬೈಲ್ ನಂಬರ್‍ಗೆ ಕರೆ ಮಾಡಿದಾಗ ಕುಶಾಲನಗರದ ವಿವಿಧ ರಸ್ತೆಗಳಲ್ಲಿ ಲೊಕೇಶನ್ ಕಂಡು ಬಂದ ಹಿನ್ನೆಲೆಯಲ್ಲಿ ವಿವಿದ ವಸತಿ ಗೃಹಗಳು ಹಾಗೂ ಕೆಲವು ಮನೆಗಳ ಬಳಿಯೂ ಪೊಲೀಸರು ತೆರಳಿ ಪರಿಶೀಲಿಸಿದಾಗ ಯಾವದೇ ಸುಳಿವು ಸಿಗಲಿಲ್ಲ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಜೊತೆಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು. ವಿವಾಹಿತ ಯುವತಿಯ ಎರಡು ಮಕ್ಕಳ ತಾಯಿಯನ್ನು ಬ್ಲಾಕ್ ಮೇಲ್ ಮಾಡಿ ಹಿಂಸಿಸುತ್ತಿರುವ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. - ಕೆ.ಎಸ್.ಮೂರ್ತಿ