ಕಣಿವೆ, ಆ. 26: ಪ್ರಸಕ್ತ ಮುಂಗಾರಿನಲ್ಲಿ ರೈತರು ಕೈಗೊಂಡಿದ್ದ ಮುಸುಕಿನ ಜೋಳದ ಅಳಿದುಳಿದ ಫಸಲಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಇದ್ದು ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.

ಇದೀಗ ಒಂದು ಕ್ವಿಂಟಾಲ್ ಒಣಗಿದ ಜೋಳಕ್ಕೆ 2,300 ರೂ. ಇದ್ದರೆ, ಆಗಷ್ಟೆ ಕಟಾವು ಮಾಡಿ ಹಲ್ಲಿಂಗ್ ಮಾಡಿದ ಹಸಿ ಜೋಳಕ್ಕೆ 1, 800 ರೂ. ಇದೆ. ಕಳೆದ ವರ್ಷದ ಆಗಸ್ಟ್‍ನಿಂದ ಇದೇ ದರ ಮಾರುಕಟ್ಟೆಯಲ್ಲಿ ಮುಂದುವರೆದಿದೆ.

ಮುಂಗಾರಿನ ಮಳೆಯನ್ನು ನಂಬಿ ಅರೆ ನೀರಾವರಿ ಪ್ರದೇಶದ ರೈತರು ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಯಿಲ್ಲದೇ ಸಂಪೂರ್ಣ ಒಣಗಿ ಹೋಗಿತ್ತು.

ಇನ್ನು ನೀರಾವರಿ ಭೂಮಿಯಲ್ಲಿ ಬೆಳೆದಿದ್ದ ಜೋಳದ ಪ್ರಮಾಣ ಕಡಿಮೆ ಇದ್ದುದರಿಂದ ಮತ್ತು ನದಿಯಂಚಿನ ಭೂ ಪ್ರದೇಶದಲ್ಲಿ ರೈತರು ಕೈಗೊಂಡಿದ್ದ ಜೋಳ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಜಲಾವೃತಗೊಂಡು ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ನದಿಯ ನೀರಿನ ಪಾಲಾದ್ದರಿಂದ ಅಪಾರ ರೈತರು ನಷ್ಟ ಅನುಭವಿಸಿದ್ದು ಈ ಬಾರಿಯ ಬೆಲೆ ಏರಿಕೆಗೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಎಲ್ಲೆಲ್ಲಿ ಬೆಳೆಯುತ್ತಾರೆ...?

ಮುಸುಕಿನ ಜೋಳವನ್ನು ಹೆಚ್ಚಾಗಿ ಶಿವಮೊಗ್ಗ, ಹಾಸನ ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ದಕ್ಷಿಣ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ.

ಕಳೆದ ವರ್ಷ ಹಾಗೂ ಈ ವರ್ಷ ಜೋಳದ ಬೆಳೆಗೆ ಸಕಾಲಿಕವಾಗಿ ಮಳೆಯಾಗದ ಕಾರಣ ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಜೋಳದ ಫಸಲು ಬಹುತೇಕ ಹಾನಿಯಾಗಿತ್ತು.

ಎಕರೆಯೊಂದಕ್ಕೆ ತಗಲುವ ಖರ್ಚು

ಎಕರೆಯೊಂದರಲ್ಲಿ ಮುಸುಕಿನ ಜೋಳವನ್ನು ಬೆಳೆಯಲು ಉಳುಮೆಗೆ 7 ಸಾವಿರ ರೂ., ಬಿತ್ತನೆ ಬೀಜಕ್ಕೆ 3 ಸಾವಿರ, ರಾಸಾಯನಿಕ ಗೊಬ್ಬರಕ್ಕೆ 7 ಸಾವಿರ ರೂ., ಬಿತ್ತನೆಗೆ ಬಳಸುವ ಕೂಲಿ ಕಾರ್ಮಿಕರಿಗೆ 2 ಸಾವಿರ ರೂ., ಕಟಾವಿಗೆ 5 ಸಾವಿರ, ಸೆಲ್ಲಿಂಗ್‍ಗೆ 2 ಸಾವಿರ ರೂ. ಹೀಗೆ ಎಲ್ಲಾ ವೆಚ್ಚಗಳು ಸೇರಿ ಒಟ್ಟು 25 ರಿಂದ 27 ಸಾವಿರ ಖರ್ಚು ತಗಲುತ್ತದೆ.

ಎಕರೆಯೊಂದಕ್ಕೆ ವಾತಾವರಣ ಪೂರಕವಾಗಿದ್ದರೆ 35 ರಿಂದ 40 ಕ್ವಿಂಟಾಲ್ ಇಳುವರಿ ಬರುತ್ತದೆ.

ಈಗ ಮಾರುಕಟ್ಟೆಯಲ್ಲಿ ಇರುವ ಬೆಲೆ ರೈತರಿಗೆ ಯಾವಾಗಲೂ ಇದ್ದಲ್ಲಿ ಮಾತ್ರ ಜೋಳ ಬೆಳೆದ ರೈತ ಲಾಭ ಗಳಿಸಬಹುದು.

ಕಳೆದ ವರ್ಷ ಇದೇ ಅವಧಿಯ ಆರಂಭದಲ್ಲಿ ಜೋಳದ ಫಸಲಿಗೆ ಕ್ವಿಂಟಾಲ್ ಒಂದಕ್ಕೆ ಕೇವಲ 900 ರೂ. ಇತ್ತು. ನಂತರ ಬೇಡಿಕೆ ಕುಸಿದ ಪರಿಣಾಮ ಮಾರುಕಟ್ಟೆಯಲ್ಲಿ ಬೆಲೆ ಒಂದೇ ಬಾರಿ ದುಪ್ಪಟ್ಟು ಏರಿತು.

ಜೋಳದ ತಳಿಗಳು : ಉತ್ತರ ಕೊಡಗಿನ ಬಯಲು ಸೀಮೆಯ ಪ್ರದೇಶಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಗುಡ್ಡೆಹೊಸೂರು, ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಹುತೇಕ ರೈತರು ಗಂಗಾ ಕಾವೇರಿ ತಳಿಯನ್ನು ಹೆಚ್ಚು ಬೆಳೆಯುತ್ತಾರೆ.

ಗಂಗಾ ಕಾವೇರಿ, ಕಿಂಗ್, ಪಯನಿಯರ್, ಸಿಪಿ, ಪ್ಯಾರಿ, ಡಿಕಾಬ್ ಸೇರಿದಂತೆ ಹದಿನೈದಕ್ಕೂ ಹೆಚ್ಚು ತಳಿಗಳಿವೆ.

ಎಲ್ಲಿಗೆ ರಫ್ತು ಮಾಡ್ತಾರೆ ?

ರೈತರು ಬೆಳೆಯುವ ಸಾವಿರಾರು ಟನ್ ಪ್ರಮಾಣದ ಜೋಳವನ್ನು ಹೆಚ್ಚಾಗಿ ಮೈಸೂರು, ಕೇರಳ, ತಮಿಳುನಾಡು ರಾಜ್ಯಗಳಿಗೆ ರಫ್ತು ಮಾಡಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಜೋಳವನ್ನು ಹೆಸರಾಂತ ಗುಣಮಟ್ಟಗಳ ಬಿಸ್ಕತ್ ತಯಾರಿಕಾ ಘಟಕಗಳು ಖರೀದಿಸುತ್ತವೆ.

ಎರಡನೇ ಗುಣಮಟ್ಟದ ಜೋಳವನ್ಮು ಫೀಡ್ಸ್ ಮತ್ತು ಸ್ನ್ಯಾಕ್ಸ್ ತಯಾರಿಸಲು ಬಳಸಲಾಗುತ್ತದೆ ಎಂದು ಜೋಳದ ವ್ಯಾಪಾರಿ ಸುಂಕದಹಳ್ಳಿ ಹೇಮಂತ್ ಕುಮಾರ್ ಹೇಳುತ್ತಾರೆ.

ಅಯ್ಯೋ ಈ ಬಾರಿಯ ಜೋಳದ ದರ ಪ್ರತೀ ವರ್ಷವೂ ಇದ್ದಲ್ಲಿ ಜೋಳ ಬೆಳೆದ ರೈತ ಖರ್ಚಿನ ಮೇಲೆ ಒಂದಷ್ಟು ಲಾಭ ಅಂತಾ ಕಾಣಲು ಸಾಧ್ಯ ವಾಗುತ್ತದೆ. ಇಲ್ಲದಿದ್ದಲ್ಲಿ ಜೋಳದ ವ್ಯಾಪಾರಿಗಳಿಂದ ಬಿತ್ತನೆ ಅವಧಿಯಲ್ಲಿ ಮುಂಗಡವಾಗಿ ಪಡೆಯುವ ಸಾಲಕ್ಕೆ ಮತ್ತು ಬಡ್ಡಿಗೆ ಸರಿಯಾಗುತ್ತಿತ್ತು ಎನ್ನುತ್ತಾರೆ ರೈತ ಚಂದ್ರಶೇಖರ.

-ವಿಶೇಷ ವರದಿ : ಕೆ.ಎಸ್.ಮೂರ್ತಿ