ಕೂಡಿಗೆ, ಆ. 25: ಕಳೆದ ವಾರದ ಸುರಿದ ಭಾರಿ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದ್ದರಿಂದ ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ಹಿತದೃಷ್ಟಿಯಿಂದ ಹಾಗೂ ಶಾಸಕರ ಆದೇಶದಂತೆ, ಜಿಲ್ಲಾಡಳಿತದ ಸೂಚನೆಯಂತೆ ನೀರನ್ನು ಸಂಗ್ರಹಿಸದೇ ಹಂತ ಹಂತವಾಗಿ 5000 ಕ್ಯೂಸೆಕ್‍ನಿಂದ 20000 ಕ್ಯೂಸೆಕ್ ವರೆಗೆ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ಹರಿಸಲಾಗಿತ್ತು.

ಇದೀಗ ಅಣೆಕಟ್ಟೆ ತುಂಬಲು ನಾಲ್ಕು ಅಡಿಗಳು ಬಾಕಿ ಇದ್ದ ಪರಿಣಾಮ, ನದಿಗೆ ಹರಿಸದೇ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ ಸಂಪೂರ್ಣ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯಿಂದ ನದಿಗೆ 1300 ಕ್ಯೂಸೆಕ್ ಮತ್ತು ನಾಲೆಗೆ 1600 ಕ್ಯೂಸೆಕ್ ನೀರನ್ನು ಹರಿಬಿಡಲಾಗಿದೆ. ಜಲಾಶಯಕ್ಕೆ ಒಳಹರಿವು 3105 ಕ್ಯೂಸೆಕ್ ಇದ್ದು, ಅಣೆಕಟ್ಟೆಯ ನೀರಿನ ಸಾಮಥ್ರ್ಯವು 8.17175 ಇದ್ದು, ಜಲಾಶಯದಲ್ಲಿ 7.42128 ಟಿಎಂಸಿ ನೀರು ಸಂಗ್ರಹವಿದೆ.

ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಪೂರ್ಣಗೊಂಡಿರುವದರಿಂದ ಜಲಾಶಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಒಳಹರಿವಿನ ನೀರನ್ನು ನದಿಗೆ ಮತ್ತು ನಾಲೆಗಳಿಗೆ ಹಂತ ಹಂತವಾಗಿ ಹರಿಬಿಡಲಾಗುತ್ತಿದೆ ಎಂದು ಸಹಾಯಕ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.