ಗೋಣಿಕೊಪ್ಪಲು, ಆ.25: ಅದೊಂದು ಕುಗ್ರಾಮ ತನ್ನ ತಾತ ಮುತ್ತಾತನ ಕಾಲದಿಂದಲೂ ಬಳುವಳಿಯಾಗಿ ಬಂದ ಎರಡು ಏಕ್ರೆ ಕಾಫಿ ತೋಟವನ್ನು ನಂಬಿ ಬದುಕು ಸಾಗಿಸುತ್ತಿರುವ ಈ ಕುಟುಂಬಕ್ಕೆ ಬೇರೆ ಯಾವ ಆದಾಯದ ಮೂಲ ಇಲ್ಲ. ಹಾಗಂತ ಇವರು ಸುಮ್ಮನೆ ಕುಳಿತು ಕಾಲ ಕಳೆಯುವವರಲ್ಲ. ಮನೆಯ ಸಮೀಪವೆ ಹಸುಗಳನ್ನು ಸಾಕುವ ಮೂಲಕ ಹಾಲನ್ನು ಅಂಗಡಿ, ಹೊಟೇಲ್ಗೆ ಮಾರಿ ಜೀವನ ಸುಖಕರವಾಗಿ ಸಾಗುತ್ತಿರುವ ಕುಟುಂಬವಿದು.
ಮಕ್ಕಳಿಲ್ಲದ ಈ ದಂಪತಿ ಹಸುಗಳನ್ನೇ ತಮ್ಮ ಮಕ್ಕಳೆಂದು ಪ್ರೀತಿಯಿಂದ ಸಲಹುತ್ತಿದ್ದಾರೆ. ಪ್ರತಿ ಹಸುಗಳಿಗೂ ಪ್ರೀತಿಯ ಹೆಸರನಿಟ್ಟು ಕರೆಯುತ್ತಾರೆ. ಮನೆಯ ಯಜಮಾನನಿಗೆ 73 ವಯಸ್ಸು, ಯಜಮಾನಿಗೆ 59 ವಯಸ್ಸಾದರೂ ಕಷ್ಟಪಟ್ಟು ದುಡಿಯುವ ಇವರಿಗೆ ವಯಸ್ಸು ಅಡ್ಡಿಯಾಗಿಲ್ಲ. ಯಾವದೇ ಆಸ್ತಿಗೆ, ಹಣಕ್ಕೆ ಆಸೆಪಡದ ಈ ದಂಪತಿ ಈಗಾಗಲೇ 500ಕ್ಕೂ ಅಧಿಕ ದನಗಳನ್ನು ಸಾಕಿದ್ದಾರೆ. ಪ್ರಸ್ತುತ ಮನೆಯ ಸಮೀಪ ಕೊಟ್ಟಿಗೆಯಲ್ಲಿ ಹತ್ತು ರಾಸುಗಳು ಹಾಗೂ ಆರು ಕರುಗಳು ಇವರೊಂದಿಗಿವೆ.
ಈ ಬಾರಿ ಸುರಿದ ಭಾರಿ ಮಳೆಯ ರಭಸಕ್ಕೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೋರ ಗ್ರಾಮದಲ್ಲಿ ಬೆಟ್ಟ ಕುಸಿದ ಪರಿಣಾಮ ಈ ಭಾಗದಲ್ಲಿ ಮನೆ,ಮಠ,ಕಾಫಿ ತೋಟ ಸಂಪೂರ್ಣ ನೆಲಕಚ್ಚಿದ್ದವು.ಅನೇಕ ಸಾವು ನೋವು ಸಂಭವಿಸಿದವು. ಬಹುತೇಕ ದನ, ಕರುಗಳು ಮಣ್ಣಿನಡಿ ಜೀವಂತವಾಗಿ ಸಮಾಧಿಯಾದವು.ಈ ಗ್ರಾಮದಲ್ಲಿ ಇಂತಹದೊಂದು ಅನಾಹುತ ನಡೆಯುತ್ತಿದ್ದಂತೆಯೇ ರಾಜ್ಯ ಮಟ್ಟದಲ್ಲಿ ಈ ಗ್ರಾಮದ ಹೆಸರು ಕೇಳಿ ಬರುವಂತಾಯಿತು. ಮಳೆಯ ಅಬ್ಬರಕ್ಕೆ ಅನತಿ ದೂರದಲ್ಲಿರುವ ಕುಟುಂಬವೊಂದನ್ನು ಸ್ಥಳಾಂತರಗೊಳಿಸಲು ಜಿಲ್ಲಾಡಳಿತ ಮುಂದೆ ಬಂತಾದರೂ ದಂಪತಿಗಳಿಬ್ಬರು ತಮ್ಮ ಹಸು, ಕರುಗಳನ್ನು ಬಿಟ್ಟು ಕದಲಲಿಲ್ಲ.
ಒಂದು ವೇಳೆ ಸಾವು ಬಂದರೆ ನಾವು ಸಾಕಿದ ಹಸುಗಳೊಂದಿಗೆ ನಾವು ಮಣ್ಣಿನಡಿಗೆ ಹೋಗುತ್ತೇವೆಂದು ಹಠ ಹಿಡಿದು ಇದೇ ಮನೆಯಲ್ಲಿ ತಾವು ಸಾಕಿದ ಹಸು ಕರುಗಳೊಂದಿಗೆ ಉಳಿದರು. ಆದರೆ ಈ ಬಡ ಕುಟುಂಬದ ಮನೆಗೆ ಮಳೆರಾಯ ಯಾವದೇ ತೊಂದರೆ ನೀಡಲಿಲ್ಲ.! ಘಟನೆ ಸಂಭವಿಸಿದ ಕೂಗಳತೆಯ ದೂರದಲ್ಲಿ ಈ ಕುಟುಂಬ ಪ್ರಸ್ತುತ ಜೀವನ ಸಾಗಿಸುತ್ತಿದೆ. ಸುತ್ತ ಮುತ್ತಲಿನ ಯಾವದೇ ಮನೆಗಳಿಲ್ಲದಿದ್ದರೂ ಸಾಕಿದ ಹಸು ಕರುಗಳನ್ನು ಬಿಟ್ಟು ಇವರು ಬೇರೆಡೆಗೆ ತೆರಳುವ ಮನಸ್ಸು ಮಾಡುತ್ತಿಲ್ಲ.
ತೋರ ಗ್ರಾಮದ ಬೆಳ್ಳಿಯಪ್ಪ, ಸರೋಜ ದಂಪತಿಗಳು ಇರುವ ವರಮಾನದಲ್ಲೇ ಸುಖಿ ಜೀವನ ಸಾಗಿಸುತ್ತಿದ್ದಾರೆ. ಮಾಸಿಕವಾಗಿ ಸರ್ಕಾರದ ವತಿಯಿಂದ ಬರುವ ಸಾವಿರ ರೂಪಾಯಿ ಪಿಂಚಣಿ ಇವರ ಕಷ್ಟಕ್ಕೆ ಸಹಾಯವಾಗುತ್ತಿದೆ. ಈ ಬಡ ಕುಟುಂಬದ ದಂಪತಿಗೆ ಸ್ವಂತ ಮಕ್ಕಳಿಲ್ಲದಿದ್ದರೂ ಮನೆಯಲ್ಲಿರುವ ಹಸು,ಕರುಗಳೇ ಇವರಿಗೆ ಮಕ್ಕಳಾಗಿವೆ. ಮಳೆ ಬಂದ ಹಿನ್ನಲೆಯಲ್ಲಿ ಈ ಭಾಗದ ರಸ್ತೆ ಸಂಚಾರ ಕಡಿದುಕೊಂಡಿದೆ. ಹಸುಗಳಿಗೆ ಮೇವಿಲ್ಲದೆ ಈ ಕುಟುಂಬ ಕಷ್ಟದಲ್ಲಿದೆ. ಇವರ ಕಷ್ಟಕ್ಕೆ ದಾನಿಗಳು ಮುಂದೆ ಬರುವ ಮೂಲಕ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸಂಸ್ಥೆಗಳು ನೆರೆ ಸಂತ್ರಸ್ತರಿಗೆ ಸವಲತ್ತುಗಳನ್ನು ವಿತರಿಸಲು ಮುಂದೆ ಬಂದ ಸಂದರ್ಭ ಈ ಕುಟುಂಬಕ್ಕೂ ಸವಲತ್ತು ನೀಡಲು ಮುಂದಾಗಿದ್ದಾರೆ. ಇಂತಹ ನೆರವನ್ನು ಮನಸಿಲ್ಲದ ಮನಸ್ಸಿನಲ್ಲಿ ಅಲ್ಪ ಸ್ವಲ್ಪ ಸ್ವೀಕರಿಸುತ್ತಿದ್ದಾರೆ.
37 ವರ್ಷದಿಂದ ಹಸುಗಳನ್ನು ಸಾಕುತ್ತಿದ್ದೇನೆ. 500ಕ್ಕೂ ಅಧಿಕ ಹಸುಗಳನ್ನು ಸಾಕಿದ್ದೇನೆ. ಈ ಹಿಂದೆ ಮೂರು ಕೊಟ್ಟಿಗೆಗಳಲ್ಲಿ ಹಸುಗಳಿದ್ದವು. ಇದೀಗ ನಮಗೆ ವಯಸ್ಸಾಗುತ್ತಿದ್ದಂತೆ ಹಸುವಿನ ಸಂಖ್ಯೆ ಕಡಿಮೆ ಮಾಡಿದ್ದೇವೆ. ಭತ್ತದ ಗದ್ದೆಯಲ್ಲಿ ಹಸುಗಳು ಚೆನ್ನಾಗಿ ಮೇಯುತ್ತಿದ್ದವು ಇದೀಗ ಗದ್ದೆ ಪೂರ್ತಿ ಬೆಟ್ಟ ಕುಸಿದು ಮಣ್ಣು ತುಂಬಿರುವದರಿಂದ ರಾಸುಗಳಿಗೆ ಮೇವುವಿಲ್ಲ. ಬಂಧುಗಳ ಸಹಕಾರದಿಂದ ಒಂದಷ್ಟು ಒಣ ಹುಲ್ಲನ್ನು ತಂದಿದ್ದೇವು. ಇದೀಗ ಇದು ಖಾಲಿಯಾಗಿದೆ. ದೂರದ ಸ್ಥಳದಿಂದ ಹುಲ್ಲನ್ನು ತರಲು ರಸ್ತೆ ವ್ಯವಸ್ಥೆ ಹಾಳಾಗಿರುವದರಿಂದ ಸಮಸ್ಯೆ ಉಲ್ಬಣಿಸಿದೆ. ರಾಸುಗಳಿಗೆ ಹೊಟ್ಟೆ ತುಂಬ ಮೇವು ಕೊಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ನೋವಾಗುತ್ತಿದೆ. ಬಾಯಿ ಬರದ ಹಸುಗಳು ತಮ್ಮ ನೋವನ್ನು ಹೇಗೆ ತಾನೇ ಹೇಳಿಯವು.? ಈ ಕಷ್ಟ ನನಗೆ ಮಾತ್ರ ಅರಿವಾಗುತ್ತಿದೆ ಎನ್ನುತ್ತಾರೆ ಹಸುವಿನ ಒಡತಿ ಸರೋಜಮ್ಮ.
ಹೆಚ್. ಕೆ. ಜಗದೀಶ್