ಮಡಿಕೇರಿ, ಆ. 25: ಕರ್ನಾಟಕ ಋಣ ಪರಿಹಾರ ವಿಧೇಯಕ-2018 ದಿನಾಂಕ: 23-07-2019 ರಿಂದ ಜಾರಿಗೆ ಬಂದಿರುತ್ತದೆ. ಅದರಂತೆ ಸಣ್ಣ ರೈತರು, ಭೂ ರಹಿತ ಕೃಷಿ ಕಾರ್ಮಿಕರು, ಮತ್ತು ದುರ್ಬಲ ವರ್ಗದ ಜನರು (ವಾರ್ಷಿಕ ಆದಾಯ ರೂ. 1,20,000/-ಮೀರದಿರುವ) ಖಾಸಗಿ ಲೇವದೇವಿದಾರರು ಮತ್ತು ಗಿರಿವಿದಾರರಿಂದ ಸಾಲ ಪಡೆದಿದ್ದಲ್ಲಿ ಕಾಯ್ದೆಯ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ಕರ್ನಾಟಕ ಋಣ ಪರಿಹಾರ ಕಾಯ್ದೆಯು ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ಭೂ ಕಂದಾಯದ ಹಿಂಬಾಕಿ ವಸೂಲಿ, ನ್ಯಾಯಾಲಯದ ಬಿಕರಿ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಕ್ಕೆ ಪಾವತಿಸಬೇಕಾದ ಯಾವದೇ ಕಂದಾಯ, ತೆರಿಗೆ, ಉಪಕಾರ ನಂಬಿಕೆ ದ್ರೋಹದ ಯಾವದೇ ಹೊಣೆಗಾರಿಕೆಗೆ, ಸಲ್ಲಿಸಿದ ಸೇವೆಗಾಗಿ ಸಂಬಳ, ಸರ್ಕಾರಿ ಕಂಪೆನಿ, ಭಾರತೀಯ ಜೀವಾ ವಿಮಾ ನಿಗಮ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿಯಲ್ಲಿ ನೋಂದಾಯಿತವಾಗಿರುವ ಅತೀ ಸಣ್ಣ ಹಣಕಾಸು ಸಂಸ್ಥೆಗಳು, ಚಿಟ್ ಫಂಡ್ ಕಾಯ್ದೆಯಡಿ ನೋಂದಣಿಗೊಂಡ ಚಿಟ್ ಕಂಪೆನಿಗಳು ಇವುಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವದಿಲ್ಲ.
ಈ ವಿಚಾರದಲ್ಲಿ ಮಡಿಕೇರಿ ಉಪವಿಭಾಗ ವ್ಯಾಪ್ತಿಯ ಮಡಿಕೇರಿ/ ವೀರಾಜಪೇಟೆ/ ಸೋಮವಾರಪೇಟೆ ತಾಲ್ಲೂಕುಗಳ ಅರ್ಹ ಸಾರ್ವಜನಿಕರು ಉಪವಿಭಾಗಾಧಿಕಾರಿ/ ತಹಶೀಲ್ದಾರ್ ಕಚೇರಿಗಳಲ್ಲಿ ನಿಗಧಿತ ನಮೂನೆ-02 ರ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಯೊಂದಿಗೆ ಋಣ ಪರಿಹಾರ ಅಧಿಕಾರಿಯಾದ ಉಪವಿಭಾಗಾಧಿಕಾರಿಗಳು, ಮಡಿಕೇರಿ ಉಪವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸುವದು.
ಸಾಲಗಾರರು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಲೇವಾದೇವಿದಾರರು ನೀಡಿರುವ ರಶೀದಿ ಪ್ರತಿ, ಪಡಿತರ ಚೀಟಿ, ತಹಶೀಲ್ದಾರರಿಂದ ಪಡೆದ ಸಣ್ಣಹಿಡುವಳಿದಾರ ದೃಢೀಕರಣ/ಭೂ ರಹಿತ ಕೃಷಿ ಕಾರ್ಮಿಕರ ದೃಢೀಕರಣ/ಆದಾಯ ದೃಢೀಕರಣ ಇತ್ಯಾದಿ ಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 22 ಕಡೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಉಪವಿಭಾಗಾಧಿಕಾರಿಗಳು, ಮಡಿಕೇರಿ ಉಪವಿಭಾಗ, ಮಡಿಕೇರಿ ಸಂಬಂಧಿಸಿದ ತಹಶೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯ ಬಹುದಾಗಿದೆ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ತಿಳಿಸಿದ್ದಾರೆ.