ಕುಶಾಲನಗರ, ಆ. 24: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಶಾಶ್ವತವಾಗಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಸಧ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೆರೆಯ ಜಿಲ್ಲೆಗಳಿಂದ ಆನೆಗಳು ಕೊಡಗು ಅರಣ್ಯವನ್ನು ಪ್ರವೇಶಿಸುತ್ತಿದ್ದು, ಈ ನಿಟ್ಟಿನಲ್ಲಿ ರೂ. 22 ಕೋಟಿ ವೆಚ್ಚದ ಯೋಜನೆಗೆ ಪ್ರಾಥಮಿಕ ಕೆಲಸ ನಡೆದಿವೆ ಎಂದು ತಿಳಿಸಿದರು.
ಕರಡಿಗೋಡಿನಿಂದ ರಸುಲ್‍ಪುರ ತನಕ ಕಾವೇರಿ ನದಿ ದಂಡೆಯಲ್ಲಿ 5 ಕಿ.ಮೀ. ಉದ್ದಕ್ಕೆ ಈ ಯೋಜನೆಗೆ ಸರ್ವೆ ಕಾರ್ಯ ನಡೆದಿದೆ. ಇನ್ನೊಂದೆಡೆ ಸೋಮವಾರಪೇಟೆ, ಬಾಣವಾರ ವ್ಯಾಪ್ತಿಯಲ್ಲಿ 5 ಕಿ.ಮೀ. ಉದ್ದಕ್ಕೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ರೈಲ್ವೆ ಇಲಾಖೆಯಿಂದ ಬ್ಯಾರಿಕೇಡ್‍ಗಳನ್ನು ಖರೀದಿಸಲಾಗಿದೆ ಎಂದು ಪ್ರಭಾಕರನ್ ಮಾಹಿತಿ ನೀಡಿದರು.
ಜಿಲ್ಲೆಯ ಮೋದೂರು, ಹೇರೂರು, ಅತ್ತೂರು, ನಲ್ಲೂರು ಮತ್ತಿತರ ಕಡೆ ಕಾಫಿ ತೋಟಗಳಲ್ಲಿ 25 ರಿಂದ 30 ಕಾಡಾನೆಗಳು ಬೀಡು ಬಿಟ್ಟಿವೆ. ಇನ್ನೊಂದೆಡೆ ಬೋಯಿಕೇರಿ ಬಳಿ ತೋಟವೊಂದರಲ್ಲಿ 3 ಕಾಡಾನೆಗಳು ಕಂಡುಬಂದಿವೆ. ಆರ್‍ಆರ್‍ಟಿ ತಂಡದ ಸದಸ್ಯರು 4 ತಂಡಗಳಾಗಿ ಈ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.