ಮಡಿಕೇರಿ, ಆ. 24: ಮಂಗಳೂರಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಸ್ಯಾಮ್ ಪೀಟರ್ ಮಂಗಳೂರಿಗೆ ಬಂದಿದ್ದೇಕೆ ಎಂಬ ಬಗ್ಗೆ ತನಿಖಾ ವರದಿಯಿಂದ ಮಾಹಿತಿ ಲಭ್ಯವಾಗಿದೆ.ವಿಚಾರಣೆ ವೇಳೆಯಲ್ಲಿ ದುಬೈ ಷರೀಫ್ ಎಂಬಾತನ ಚಿನ್ನವನ್ನು ಬೆಂಗಳೂರು ಕಸ್ಟಮ್ ಅಧಿಕಾರಿಗಳು ಹಿಡಿದು ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಷರೀಫ್‍ನು ಬೆಂಗಳೂರಿನ ವಕೀಲ ಮುಜಾಫರ್ ಅಹಮ್ಮದ್ ಅವರಿಗೆ ತಿಳಿಸಿದಾಗ, ಗಿರೀಶ್ ರೈ ಮತ್ತು ಇಮ್ತಿಯಾಜ್ ಅವರನ್ನು ಷರೀಫ್‍ಗೆ ಪರಿಚಯ ಮಾಡಿಸಿ ಕಸ್ಟಮ್ ಇಲಾಖೆಯಲ್ಲಿ ಕೇಸು ಆಗದಂತೆ ಇವರು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದರು. ವಕೀಲ ಮುಜಾಫರ್ ಅಹಮ್ಮದ್, ದುಬೈ ಷರೀಫ್‍ನಿಂದ ಗಿರೀಶ್ ರೈ ಮತ್ತು ಇಮ್ತಿಯಾಜ್‍ಗೆ 1.7 ಕೋಟಿ ಹಣ ಕೊಡಿಸಿದ್ದಾರೆ. ಆದರೆ, ದುಬೈ ಷರೀಫ್‍ನ ವಿರುದ್ಧ ಕಸ್ಟಮ್ ಇಲಾಖೆಯಲ್ಲಿ ಮೊಕದ್ದಮೆ ದಾಖಲಾದ ಕಾರಣ 1.7 ಕೋಟಿ ನಷ್ಟ ಆಗಿದ್ದು, ಇದನ್ನು ಮುಜಾಫರ್ ಮುಖಾಂತರ ಹಣ ಕೊಟ್ಟ ಕಾರಣ, ಷರೀಫನು ಹಣ ವಾಪಾಸ್ ಕೊಡುವಂತೆ ವಕೀಲರ ಬೆನ್ನು ಬಿದ್ದ ಹಿನ್ನೆಲೆ ಮುಜಾಫರ್, ಸ್ಯಾಮ್ ಪೀಟರ್‍ನಿಗೆ ಮಂಗಳೂರಿಗೆ ಹೋಗಿ ಗಿರೀಶ್ ರೈ ಮತ್ತು ಇಮ್ತಿಯಾಜ್ ಅವರನ್ನು ಅಪಹರಿಸಿ, ಹಣ ವಸೂಲಿ ಮಾಡಿಕೊಡುವಂತೆ ತಿಳಿಸಿದ್ದಾರೆ. ಅದಕ್ಕಾಗಿ ಮಂಗಳೂರಿನಲ್ಲಿ ಅಬ್ದುಲ್ ಲತೀಫ್ ಮತ್ತು ಜಿ. ಮೊಹಿದ್ದಿನ್ ಚೆರಿಯನ್ ಅವರು ಸಹಾಯ ಮಾಡುತ್ತಾರೆಂದು ತಿಳಿಸಿ

ಸ್ಯಾಮ್ ಪೀಟರ್ ಮಂಗಳೂರಿಗೆ ಬಂದಿದ್ದೇಕೆ...?

(ಮೊದಲ ಪುಟದಿಂದ) ಕಳುಹಿಸಿದ್ದು, ಈ ಬಗ್ಗೆ ಸ್ಯಾಮ್ ಪೀಟರ್ ಮಂಗಳೂರಿಗೆ ಬಂದ ಸಮಯದಲ್ಲಿ ಲತೀಫ್ ಮತ್ತು ಜಿ. ಮೊಹಿದ್ದಿನ್ ಚೆರಿಯನ್ ಅವರುಗಳು ಸ್ಯಾಮ್ ಪೀಟರ್‍ಗೆ ಸಹಕರಿಸಿದ್ದಾರೆ.

ಅಬ್ದುಲ್ ಲತೀಫ್ ಮತ್ತು ಜಿ. ಮೊಹಿದ್ದಿನ್ ಚೆರಿಯನ್ ಅವರುಗಳು ಸ್ಯಾಮ್ ಪೀಟರ್‍ಗೆ ಮಂಗಳೂರಿನಲ್ಲಿ ಉಳಿದುಕೊಳ್ಳಲು ಸಹಕರಿಸಿ ಆತನೊಂದಿಗೆ ಕೃತ್ಯಕ್ಕೆ ಸಂಚು ರೂಪಿಸಿ, ಗಿರೀಶ್ ರೈ ಮತ್ತು ಇಮ್ತಿಯಾಜ್ ಅವರಿಂದ ಹಣ ವಸೂಲಿ ಮಾಡಿದ ನಂತರ ಬಂದ ಹಣದಲ್ಲಿ ಪರ್ಸೆಂಟೇಜ್ ಹಣವನ್ನು ನೀಡಬೇಕೆಂದು ಮಾತುಕತೆ ಮಾಡಿದ್ದರು ಎಂದು ತಿಳಿದು ಬಂದಿದೆ.