ಮಡಿಕೇರಿ, ಆ. 24: ವಿಘ್ನ ನಿವಾರಕ, ಪಾರ್ವತಿ ತನಯ ವಿನಾಯಕನ ಆರಾಧನೆಗೆ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಸಜ್ಜಾಗುತ್ತಿದೆ. ಮಂಜಿನ ನಗರಿಯ 25ಕ್ಕೂ ಅಧಿಕ ಕಡೆಗಳಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಗೌರಿ - ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಲಿದೆ.ಪ್ರತಿ ವರ್ಷವೂ ಅದ್ಧೂರಿಯಾಗಿ ನಡೆಯುತ್ತಿದ್ದ ಗಣೇಶೋತ್ಸವ ಕಳೆದ ಬಾರಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದರಿಂದ ಕಳೆಗುಂದಿತ್ತು. ಗಣಪತಿ ಉತ್ಸವ ಸಮಿತಿಗಳು ಸಾಂಪ್ರದಾಯಿಕ ಆಚರಣೆ ಒತ್ತುಕೊಟ್ಟು ಸರಳವಾಗಿ ಆಚರಣೆ ಮಾಡಿದ್ದವು. ಇದೀಗ ಈ ಬಾರಿಯು ಕೂಡ ಮಳೆ ರೌದ್ರನರ್ತನ ತೋರಿದ್ದು; ವ್ಯಾಪಾರ ವಹಿವಾಟುಗಳೆಲ್ಲ ನೆಲಕಚ್ಚಿ ಚಂದಾ ಹಣ ಸಂಗ್ರಹಕ್ಕೂ ಹೊಡೆತ ಬಿದ್ದ ಕಾರಣ ಈ ಬಾರಿಯು ವಿನಾಯಕನ ಆರಾಧನೆ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾದಂತಿರುವದು ಸದ್ಯದ ಚಿತ್ರಣ. ಬಹುತೇಕ ಎಲ್ಲಾ ಸಮಿತಿಗಳು ಚಂದಾ ವಸೂಲಿಗಾಗಿ ಶ್ರಮಿಸುತ್ತಿದ್ದರೂ ಕೂಡ ಎಲ್ಲೆಡೆ ಹದಗೆಟ್ಟಿರುವ ಆರ್ಥಿಕ ಸ್ಥಿತಿಯಿಂದಾಗಿ ಆಡಂಬರದ ಆಚರಣೆಗೆ ಅಡ್ಡಿಯುಂಟಾಗುತ್ತಿದೆ.

(ಮೊದಲ ಪುಟದಿಂದ) ಹೀಗಿದ್ದರೂ ಕೂಡ ಮಡಿಕೇರಿ ನಗರದ ಸುಮಾರು 25ಕ್ಕೂ ಅಧಿಕ ಕಡೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಅಶೋಕಪುರ ಗಣಪತಿ ಉತ್ಸವ ಸಮಿತಿ, ಮಂಗಳಾದೇವಿನಗರ ಆದಿಪರಾಶಕ್ತಿ ಯುವಕ ಸಂಘ, ಶಾಂತಿನಿಕೇತನ ಯುವಕ ಸಂಘ, ಗಣಪತಿ ಬೀದಿ ಗಣಪತಿ ಯುವಕ ಸಂಘ, ಧಾರ್ಮಿಕ್ ಯುವ ವೇದಿಕೆ, ವಿದ್ಯಾನಗರ ವಿನಾಯಕ ಉತ್ಸವ ಸಮಿತಿ, ಮಹಾಗಣಪತಿ ಸೇವಾ ಸಮಿತಿ ವಿಜಯ ನಗರ, ಸಂಪಿಗೆಕಟ್ಟೆ ಯುವಕ ಸಂಘ, ಕನ್ನಂಡಬಾಣೆ ದೃಷ್ಟಿ ಗಣಪತಿ ಯುವಕ ಸಂಘ, ಮಲ್ಲಿಕಾರ್ಜುನ ನಗರ ಜ್ಯೋತಿ ಯುವಕ ಸಂಘ, ಕೆಇಬಿ ಗಣೇಶೋತ್ಸವ ಸಮಿತಿ, ರಾಜಾಸೀಟು ಹಿಂಭಾಗ ಸಿದ್ಧಿವಿನಾಯಕ ಯುವಕ ಮಂಡಳಿ, ಮಹದೇವಪೇಟೆ ವಿನಾಯಕ ಯುವಕ ಮಿತ್ರ ಮಂಡಳಿ, ದೇಚೂರು ವಿದ್ಯಾವಾರಿಧಿ ಮಿತ್ರ ಮಂಡಳಿ, ಓಂಕಾರ್ ಯುವ ವೇದಿಕೆ, ಕೊಹಿನೂರು ರಸ್ತೆ ಹಿಂದೂ ಯುವ ಶಕ್ತಿ, ರಾಘವೇಂದ್ರ ದೇವಾಲಯ ಕಲಾ ನಗರ ಸಾಂಸ್ಕøತಿಕ ವೇದಿಕೆ, ಸ್ವಸ್ತಿಕ್ ಯುವಕ ವೇದಿಕೆ, ಜ್ಯೋತಿನಗರ ಶಿವಶಕ್ತಿ ಯುವಕ ಮಿತ್ರ ಮಂಡಳಿ, ಚಾಮುಂಡೇಶ್ವರಿ ನಗರ ಕೇಸರಿ ಯುವಕ ಸಂಘ, ನಗರಸಭೆ ಗಣಪತಿ ಸಮಿತಿ, ಚೈನ್‍ಗೇಟ್ ವಿದ್ಯಾ ವಿನಾಯಕ ಯುವಕ ಸಂಘ, ಭಗವತಿ ನಗರ ಕರವಲೆ ಭಗವತಿ ಯುವಕ ಸಂಘ, ಹೊಸ ಬಡಾವಣೆ ಪ್ರಸನ್ನ ಗಣಪತಿ ಸಮಿತಿ, ಮೈತ್ರಿ ವಿಘ್ನೇಶ್ವರ ಯುವಕ ಸಂಘ, ಗೌಳಿಬೀದಿ ಕಾಮಾಕ್ಷಿ ಯುವಕ ಸಂಘ, ಉಕ್ಕಡ ಗಣಪತಿ ಸಮಿತಿ, ಪುಟಾಣಿ ನಗರ ಉದ್ಭವ ವಿನಾಯಕ ಸೇವಾ ಸಮಿತಿ, ತ್ಯಾಗರಾಜ ಕಾಲೋನಿ ಅಭಿಷ್ಠ ಪ್ರದ ವಿನಾಯಕ ಯುವಕ ಸಂಘ ಇವೆಲ್ಲಾ ಸಮಿತಿಗಳು ಹಲವಾರು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದು, ಈ ಬಾರಿಯು ಕೂಡ ವಿನಾಯಕನ ಆರಾಧನೆಗೆ ಸಜ್ಜಾಗುತ್ತಿವೆ.

ಗಣೇಶೋತ್ಸವ ಪ್ರಯುಕ್ತ ಗಣಪತಿ ಉತ್ಸವ ಮೂರ್ತಿಗಳ ಮಾರಾಟ ಕೂಡ ಮಡಿಕೇರಿಯಲ್ಲಿ ಆರಂಭವಾಗಿದೆ. ಬಂದಿರುವ ಬಹುತೇಕ ಗಣಪತಿ ಗೌರಿ ಮೂರ್ತಿಗಳೆಲ್ಲವೂ ಈಗಾಗಲೇ ಕಾಯ್ದಿರಿಸಲ್ಪಟ್ಟಿವೆ. ಮಣ್ಣಿನಿಂದ ತಯಾರಿಸಲಾದ ಪರಿಸರ ಸ್ನೇಹಿ ಗಣಪತಿಗಳನ್ನು ಮಾರಾಟಕ್ಕಿಡಲಾಗಿದೆ ಎಂದು ಸುಮಾರು 25ಕ್ಕೂ ಅಧಿಕ ವರ್ಷಗಳಿಂದ ಗೌರಿ ಗಣಪತಿ ಮೂರ್ತಿಗಳನ್ನು ಮಡಿಕೇರಿಗೆ ತಂದು ಮಾರಾಟ ಮಾಡುತ್ತಿರುವ ವ್ಯಾಪಾರಿ ಪ್ರಶಾಂತ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಇನ್ನು ಹಲವಾರು ವರ್ಷಗಳಿಂದ ಗೌರಿ ಗಣಪತಿ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ನಗರದ ಕಲಾವಿದ ಪ್ರಸಕ್ತ ವರ್ಷ ಕೂಡ ಮೂರ್ತಿಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.