ಮಡಿಕೇರಿ, ಆ. 24: ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಹಾನಿ ಸಂಬಂಧ ಖುದ್ದು ಪರಿಶೀಲನೆ ನಡೆಸಲು ತಾ. 27ರಂದು ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಆಗಮಿಸಲಿದೆ. ಕೇಂದ್ರ ಸರಕಾರದ ಆಡಳಿತ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇತರ ಆರು ಮಂದಿ ಉನ್ನತ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.ಈ ಅಧ್ಯಯನ ತಂಡದ ಅಧಿಕಾರಿಗಳು ಕುಶಾಲನಗರ ಹಾಗೂ ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ಖುದ್ದು ಪರಿಶೀಲನೆ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ‘ಶಕ್ತಿ’ಯೊಂದಿಗೆ ಖಚಿತಪಡಿಸಿದ್ದಾರೆ.ಅಲ್ಲದೆ ಕಾವೇರಿ ಹೊಳೆದಂಡೆ ಪ್ರದೇಶದ ಸಿದ್ದಾಪುರ ಸುತ್ತಮುತ್ತ ಹಾಗೂ ವೀರಾಜಪೇಟೆ ವ್ಯಾಪ್ತಿಯಲ್ಲಿ ಹಾನಿಯಾಗಿರುವ ಪ್ರದೇಶಗಳಲ್ಲಿ ಪರಿಶೀಲಿಸಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಕೇಂದ್ರ ತಂಡ ಕೊಡಗಿನ ನಷ್ಟವನ್ನು ಖುದ್ದು ಪರಿಶೀಲಿಸಿ ಸರಕಾರದ ಗಮನ ಸೆಳೆಯಲು ಆಗಮಿಸುತ್ತಿರುವದಾಗಿ ಅವರು ಸ್ಪಷ್ಟಪಡಿಸಿದ್ದಾರೆ.