ಸಿದ್ದಾಪುರ, ಆ. 23: ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯ ಲಾಗಿರುವ ಪರಿಹಾರ ಕೇಂದ್ರದಿಂದ ಸಂತ್ರಸ್ತರು ಕೇಂದ್ರವನ್ನು ಬಿಟ್ಟು ತೆರಳುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಂಬಾರಗುಂಡಿ ಹಾಗೂ ಘಟ್ಟದ ಕಾಡು ವ್ಯಾಪ್ತಿಯ ನೂರಾರು ಸಂತ್ರಸ್ತರು ನೆಲ್ಲಿಹುದಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದು ಇವರುಗಳಿಗೆ ಶಾಶ್ವತ ಸೂರು ಸಿಗುವವರೆಗೂ ಪರಿಹಾರ ಕೇಂದ್ರ ಬಿಟ್ಟು ತೆರಳುವದಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಉಪವಿಭಾಗಾಧಿಕಾರಿ ಜವರೇಗೌಡ ಅವರು ಸಂತ್ರಸ್ತರ ಮನವೊಲಿಸಿ ಸರಕಾರದ ಯೋಜನೆಗಳನ್ನು ತಿಳಿಸಿದರೂ; ಸಂತ್ರಸ್ತರು ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಬಂದು ಶಾಶ್ವತ ಸೂರಿನ ಬಗ್ಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ಬುಧವಾರದಂದು ಆಗಮಿಸಿದ್ದ ಸಚಿವರು ಹರಿಹರ ಕೇಂದ್ರಕ್ಕೆ ಬರಲಿಲ್ಲವೆಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಶ್ವತ ಸೂರು ಸಿಗುವವರೆಗೂ ಕೇಂದ್ರದಿಂದ ತೆರಳುವದಿಲ್ಲ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ.