ಶನಿವಾರಸಂತೆ, ಆ. 23: ದುಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಾದ್ರೆ ಹೊಸಳ್ಳಿ ಹಾಗೂ ಚೀಕನಹಳ್ಳಿ ರಸ್ತೆ ಬದಿಯಲ್ಲಿ ಕೋಳಿ ಮಾಂಸದ ಅಂಗಡಿಯನ್ನು ಇಟ್ಟುಕೊಳ್ಳಲು ಪರವಾನಗಿ ಕೊಟ್ಟಿರುವದನ್ನು ಗ್ರಾಮಸ್ಥರು ವಿರೋಧಿಸಿದ್ದು, ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ದುಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮೊದಲಿದ್ದ ಕೋಳಿ ಮಾಂಸ ಮಾರಾಟದ ಜಾಗ ಬಿಟ್ಟು ರಸ್ತೆ ಬದಿಯಲ್ಲಿ ಪರವಾನಗಿಯನ್ನು ನೀಡಲಾಗಿದೆ. ಸುತ್ತಮುತ್ತ ಸಾರ್ವಜನಿಕರು ವಾಸವಿದ್ದು, ಕೋಳಿ ಅಂಗಡಿಯ ಗಲೀಜು ನೀರು ಹರಿಯುವದರಿಂದ ಕೆಟ್ಟ ವಾಸನೆ ಬಂದು ವಾಸಮಾಡಲು ತೊಂದರೆಯಾಗುತ್ತಿದೆ. ಕೋಳಿ ಮಾಂಸದ ಅಂಗಡಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರಾದ ಎಂ.ಆರ್. ಮಲ್ಲಿಕಾರ್ಜುನ ವೈ.ವಿ. ನಾಗೇಶ್, ಶಶಿಕಲಾ, ಎಲ್.ಎಂ. ಶೈಲಾ, ವೇದಾವತಿ, ಸುರೇಶ್, ಶಾಲಿನಿ, ವೈ.ವಿ. ಹೇಮಂತ, ವೈ.ಎನ್. ಚಂದ್ರಪ್ಪ ಹಾಗೂ ಇತರ 40 ಮಂದಿ ಸಾರ್ವಜನಿಕರು ಲಿಖಿತ ಹೇಳಿಕೆಯ ಮನವಿಯನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.