ಕುಶಾಲನಗರ, ಆ. 22: ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಬಲಮುರಿ-ಅತ್ತೂರು ರಸ್ತೆ ಕಾಮಗಾರಿ ಒಂದು ತಿಂಗಳ ಅವಧಿಯಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ತಿಳಿಸಿದ್ದಾರೆ.

ರಸ್ತೆ ಅಭಿವೃದ್ಧಿಗೆ ಈಗಾಗಲೆ ರೂ. 85 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ತಾಂತ್ರಿಕ ಕಾರಣಗಳಿಂದ ಪ್ರಾರಂಭವಾಗಿಲ್ಲ. ಜಿಲ್ಲಾ ಪಂಚಾಯ್ತಿ ಅಧೀನದಲ್ಲಿರುವ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದ್ದು ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಮುಳ್ಳುಸೋಗೆ ಗ್ರಾ.ಪಂ. ನ ಕೆಲವು ಸದಸ್ಯರು ರಾಜಕೀಯ ಪ್ರೇರಿತವಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿರುವದು ಸರಿಯಲ್ಲ ಎಂದ ಅವರು ಜನಪ್ರತಿನಿಧಿಗಳಾಗಿ ಅಭಿವೃದ್ಧಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕಳೆದ 4 ವರ್ಷಗಳ ಅವಧಿಯಲ್ಲಿ ತಮ್ಮದೇ ಪಕ್ಷದ ಸರಕಾರವಿದ್ದರೂ ಪಂಚಾಯಿತಿ ಸದಸ್ಯರಾದ ಜಗದೀಶ್, ಹರೀಶ್ ಮತ್ತಿತರರು ರಸ್ತೆ ಅಭಿವೃದ್ಧಿ ಬಗ್ಗೆ ಚಕಾರವೆತ್ತದೆ ಇದೀಗ ಗ್ರಾಪಂ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರ ಬಳಿ ತೆರಳುತ್ತಿರುವದು ಹಾಸ್ಯಾಸ್ಪದ ಎಂದಿದ್ದಾರೆ.

ಜಿ.ಪಂ. ಸದಸ್ಯೆಯಾದ ನಂತರ ಈ ರಸ್ತೆ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ಅಂದಾಜು ರೂ. 30 ಲಕ್ಷ ರಸ್ತೆ ಅಭಿವೃದ್ಧಿಗೆ ವ್ಯಯಿಸಲಾಗಿದೆ ಎಂದು ತಿಳಿಸಿರುವ ಮಂಜುಳಾ ರಸ್ತೆ ಪರಿಸ್ಥಿತಿಯ ಬಗ್ಗೆ ಕ್ಷೇತ್ರ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಈ ಸಂದರ್ಭ ಮುಳ್ಳುಸೋಗೆ ಗ್ರಾಪಂ ಸದಸ್ಯರಾದ ವೇದಾವತಿ, ರುದ್ರಾಂಬಿಕೆ, ದೊಡ್ಡಣ್ಣ, ಮಾಜಿ ಸದಸ್ಯ ಚೆಲುವರಾಜು, ಬಿಜೆಪಿ ತಾಲೂಕು ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಬಗ್ಗೆ ಜಿ.ಪಂ. ಸದಸ್ಯೆ ಮಂಜುಳಾ ಅವರೊಂದಿಗೆ ಚರ್ಚಿಸಿದರು.