ಒಡೆಯನಪುರ, ಆ. 21: ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಸಮೀಪದ ಮೂದರಲ್ಲಿ ಗ್ರಾಮದಲ್ಲಿರುವ ಎ ಮತ್ತು ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಎಸ್.ವಿ. ಶುಭು ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ವಿಶೇಷವಾಗಿ ಮಳೆಗಾಲದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಬೆಚ್ಚಗಿನ ವಾತಾವರಣದ ನಡುವೆ ಇರಲು ಪ್ರಯತ್ನಿಸಬೇಕೆಂದರು. ರೋಟರಿ ಸಂಸ್ಥೆ ಸಮಾಜ ಸೇವೆ ನೀಡುವ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಶನಿವಾರಸಂತೆ ರೋಟರಿ ಕ್ಲಬ್ ವತಿಯಿಂದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸ್ವೆಟರ್‍ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಸಂಘ- ಸಂಸ್ಥೆ ಹಾಗೂ ದಾನಿಗಳು ನೀಡುವ ಸವಲತ್ತು, ಸಹಾಯವನ್ನು ಸದುಪಯೋಗಿಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಮಕ್ಕೆ, ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿ ತಂದುಕೊಡುವಷ್ಟು ಪ್ರಬುದ್ಧ ವಿದ್ಯಾರ್ಥಿಗಳಾಗಿ ಹೊರಹೊಮ್ಮುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಎಚ್.ಪಿ. ಚಂದನ್, ರೋಟರಿಯನ್ ಪ್ರಮುಖರಾದ ಹೆಚ್.ಎಸ್. ವಸಂತ್‍ಕುಮಾರ್, ಎ.ಡಿ. ಮೋಹನ್ ಕುಮಾರ್, ಡಿ. ಅರವಿಂದ್ ರವಿ, ಶ್ವೇತಾ ವಸಂತ್, ಎಚ್.ವಿ. ದಿವಾಕರ್, ಮೋನಿಕಾ ಶುಭು, ಕೆ.ಎಂ. ವಿನೂತ್ ಶಂಕರ್, ಹೆಚ್.ವಿ. ಪ್ರದೀಪ್‍ಕುಮಾರ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.

- ವಿ.ಸಿ. ಸುರೇಶ್ ಒಡೆಯನಪುರ