ಮಡಿಕೇರಿ, ಆ. 22: ಇದೀಗ ಎಲ್ಲೆಲ್ಲೂ ‘ರಾಂಧವ’ನ ಕಲರವ- ಕನ್ನಡ ಚಿತ್ರ ರಂಗದಲ್ಲಿ ಕಳೆದ ಹಲವಷ್ಟು ಸಮಯಗಳಿಂದ ಭಾರೀ ಸದ್ದು ಮಾಡುತ್ತಿರುವ ಸುನಿಲ್ ಆಚಾರ್ಯ ನಿರ್ದೇಶನದ ಕೊಡಗಿನ ಯುವ ನಟ ಉಳ್ಳಿಯಡ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ‘ರಾಂಧವ’ ತಾ. 23 ರಂದು (ಇಂದು) ತೆರೆ ಕಾಣಲಿದೆ.ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿಯಾಗಿರುವ ಈ ಚಿತ್ರ ಯಶಸ್ವಿಯಾಗುವ ಎಲ್ಲಾ ಸೂಚನೆಗಳು ಕಂಡು ಬಂದಿದ್ದು, ಚಿತ್ರ ಪ್ರೇಮಿಗಳು ‘ರಾಂಧವ’ ಬರುವಿಕೆಗಾಗಿ ಕಾತರದಿಂದಿದ್ದಾರೆ. ಪ್ರತಿಷ್ಠಿತ ರಿಯಾಲಿಟಿ ಶೋಗಳಾದ ಇಂಡಿಯನ್ ಬಿಗ್‍ಬಾಸ್‍ನಲ್ಲಿ ಭಾಗವಹಿಸಿ ಗುರುತಿಸಿಕೊಂಡಿರುವ ಭುವನ್ ಪೊನ್ನಣ್ಣ ಈ ಹಿಂದೆ ಹಲವು ಚಲನÀ ಚಿತ್ರಗಳಲ್ಲಿ ನಟಿಸಿರುವವರಾದರೂ ಕೊಡಗಿನವರಾದ ಕೊಡವ ಯುವಕನೋರ್ವ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಪ್ರಥಮ ಚಿತ್ರ ಇದಾಗಿದೆ.ಜಿಲ್ಲೆಯ ಹಲವಾರು ತಾರೆಯರು ಚಿತ್ರರಂಗದಲ್ಲಿ ನಾಯಕಿಯರಾಗಿ ಛಾಪು ಮೂಡಿಸಿದ್ದಾರೆ. ಇನ್ನೂ ಕೆಲವರು ‘ವಿಲನ್’ ಪಾತ್ರಧಾರಿಗಳಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರ ನಡುವೆ ಇದೀಗ ‘ರಾಂಧವ’ನಾಗಿ ಎದ್ದು ಬರುತ್ತಿದ್ದಾನೆ ಭುವನ್ ಪೊನ್ನಣ್ಣ.

ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷರಾದ, ಬ್ರಹ್ಮಗಿರಿ ಪತ್ರಿಕೆಯ ಉಳ್ಳಿಯಡ ಎಂ. ಪೂವಯ್ಯ ಹಾಗೂ ಡಾಟಿ ಪೂವಯ್ಯರವರ ಪುತ್ರನಾದ ಭುವನ್ ಚಿಕ್ಕಂದಿನಿಂದಲೇ ಅಭಿನಯದಲ್ಲಿ ತನ್ನ ಪ್ರತಿಭೆ ತೋರಿದ್ದಾನೆ. ತಾಯಿಯ ಗರಡಿಯ ಮೂಲಕ ಪಳಗಿದ ಭುವನ್ ಕಳೆದ 15 ವರ್ಷಗಳಿಂದ ಹಲವಾರು ನಾಟಕ, ಹರಿಕಥೆ, ರಿಯಾಲಿಟಿ ಶೋನಲ್ಲೂ ಅಭಿನಯಿಸಿದ್ದು ಮಾತ್ರವಲ್ಲದೆ, ಖ್ಯಾತ ನಟರಾದ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಜಗ್ಗೇಶ್ ಅವರುಗಳ ಚಿತ್ರದಲ್ಲೂ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದಾನೆ.

ಜಸ್ಟ್ ಮಾತ್ ಮಾತಲ್ಲಿ, ಕೂಲ್, ಮಂಜುನಾಥ ಎಲ್‍ಎಲ್‍ಬಿ ಸೇರಿದಂತೆ ತಮಿಳು ಚಿತ್ರವೊಂದರಲ್ಲೂ ವಿಲನ್ ಪಾತ್ರಧಾರಿಯಾಗಿದ್ದ ಭುವನ್ ಇದೀಗ ನಾಯಕ ನಟನಾಗಿ ಗುರುತಿಸಿಕೊಂಡಿರುವದು ವಿಶೇಷ. ಇನ್ನು ಚಿತ್ರದ ಬಗ್ಗೆ ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ ಭುವನ್ ‘ರಾಂಧವ’ ಇದೊಂದು ವಿಶಿಷ್ಟ ರೀತಿಯಲ್ಲಿ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸುವ ಚಿತ್ರ. ಈ ಚಿತ್ರದಲ್ಲಿ ತ್ರಿಪಾತ್ರದಲ್ಲಿ ತಮ್ಮ ಅಭಿನಯವಿದ್ದು, ಇದೊಂದು ‘ಚ್ಯಾಲೆಂಜಿಂಗ್’ ವಿಚಾರವಾಗಿದೆ. ಮೂರು ಕಾಲಘಟ್ಟದಲ್ಲಿನ ಸನ್ನಿವೇಶಗಳನ್ನು ಎರಡೂವರೆ ತಾಸಿನ ಚಿತ್ರದ ಮೂಲಕ ನಿರ್ದೇಶಕರಾದ ಸುನಿಲ್ ಆಚಾರ್ಯ ಹಾಗೂ ಇಡೀ ಚಿತ್ರ ತಂಡ ತೋರಿಸಿಕೊಟ್ಟಿದೆ.

ಖಂಡಿತವಾಗಿಯೂ ಈ ಚಿತ್ರ ಚಿತ್ರ ಪ್ರೇಮಿಗಳಿಗೆ ಉತ್ತಮ ಅನುಭವ ನೀಡುತ್ತದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಳ್ಳುವದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಡುಗಡೆಗೂ ಮುನ್ನವೇ ಚಿತ್ರ ಗೆದ್ದಿದೆ ಎಂಬ ನಂಬಿಕೆ ತಾನೂ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಇದೆ ಎನ್ನುವ ಭುವನ್ ಚಿತ್ರ ಪ್ರೇಮಿಗಳ ಪ್ರೋತ್ಸಾಹದ ನಿರೀಕ್ಷೆಯಲ್ಲಿರುವದಾಗಿ ಹೇಳಿದರು.

ತಾ. 23 ರಿಂದ (ಇಂದಿನಿಂದ) ಕರ್ನಾಟಕ ರಾಜ್ಯ ಸೇರಿದಂತೆ ಹಲವಾರು ಭಾಗಗಳಲ್ಲಿ ‘ರಾಂಧವ’ ಆರ್ಭಟಿಸಲಿದ್ದಾನೆ.

-ಶಶಿ