ಸೋಮವಾರಪೇಟೆ, ಆ. 21: 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಅನೇಕ ಕಾಫಿ ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಕೂಡಲೇ ತಾಲೂಕಿನಲ್ಲಿ ಅದಾಲತ್ ಆಯೋಜಿಸಿ ಆ ಮೂಲಕ ಅರ್ಜಿ ಪಡೆದುಕೊಳ್ಳುವಂತೆ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ತಾಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿಯಾದ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ನೇತೃತ್ವದ ತಂಡ, ಕಾಫಿ ಬೆಳೆಗಾರರಿಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು.

ಕಳೆದ ವರ್ಷ ಮೂರು ತಿಂಗಳ ಕಾಲ ಸತತ ಮಳೆ ಸುರಿದ ಪರಿಣಾಮ ತಾಲೂಕಿನಾದ್ಯಂತ ಶೇ. 70 ರಿಂದ 80 ರಷ್ಟು ಬೆಳೆಹಾನಿಯಾಗಿದೆ. ಶೀತಕ್ಕೆ ಕಾಫಿ ತೋಟಗಳು ರೋಗಪೀಡಿತ ವಾಗಿವೆ. ಅಲ್ಲದೆ ಭೂಕುಸಿತದಿಂದ ತುಂಬಲಾರದಷ್ಟು ಹಾನಿಯಾಗಿದೆ. ಆದರೆ ಹೆಚ್ಚಿನ ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆ ಪಟ್ಟಣದಲ್ಲಿ ಅದಾಲತ್ ಮೂಲಕ ಅರ್ಜಿ ಪಡೆದು, ಸೂಕ್ತ ಪರಿಹಾರ ಕಲ್ಪಿಸಿಕೊಡ ಬೇಕೆಂದು ಮನವಿ ಮಾಡಲಾಯಿತು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕಳೆದ ವರ್ಷ ಅರ್ಜಿ ಸಲ್ಲಿಸಿಯೂ ಸೂಕ್ತ ಪರಿಹಾರ ಸಿಗದೆ ಇರುವಂತವರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಿದರು. 2019-20ನೇ ಸಾಲಿನಲ್ಲಿ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿ ಯಾದಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಪರಿಹಾರ ಅರ್ಜಿ ಫಾರಂಗಳು ಕಂದಾಯ ಇಲಾಖೆಯಲ್ಲಿ ಸಿಗಲಿದೆ ಎಂದು ಹೇಳಿದರು.

ಕಳೆದ ವರ್ಷ ಅರ್ಜಿ ಸಲ್ಲಿಸಿ ಪರಿಹಾರ ಸಿಗದ ರೈತರು, ಆರ್.ಟಿ.ಸಿ., ಆಧಾರ್ ನಕಲು, ಬ್ಯಾಂಕ್ ಖಾತೆಯ ನಕಲು ಪ್ರತಿ, ಫೋಟೊಗಳೊಂದಿಗೆ ಅರ್ಜಿಯನ್ನು, ಪಟ್ಟಣದಲ್ಲಿರುವ ಕಾಫಿ ಬೆಳೆಗಾರರ ಸಂಘದ ಕಚೇರಿಗೆ 10 ದಿನಗಳ ಒಳಗಾಗಿ ತಲಪಿಸಿದರೆ, ಅಂತಹ ಅರ್ಜಿಗಳನ್ನು ಸಂಘವೇ ಜಿಲ್ಲಾಧಿಕಾರಿ ಗಳಿಗೆ ತಲಪಿಸಲಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ತಿಳಿಸಿದರು.

ಪ್ರಸಕ್ತ ವರ್ಷವೂ ಕಾಫಿ ಬೆಳೆಗೆ ಹಾನಿಯಾಗಿದ್ದರೆ, ಆ. 28 ರೊಳಗೆ ಕಾಫಿ ಮಂಡಳಿಗೆ ನೇರವಾಗಿ ಪರಿಹಾರಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಸುರೇಶ್ ಬೋಪಣ್ಣ ಹೇಳಿದರು.