ಕುಶಾಲನಗರ, ಆ. 22: ರಾಸಾಯನಿಕ ಬಣ್ಣರಹಿತ ಮಣ್ಣಿನ ಗಣೇಶ ಪ್ರತಿಷ್ಠಾಪಿಸಿ ಜಲಮಾಲಿನ್ಯ ತಡೆಯಲು ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆ ಯಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಕುರಿತ ಜಾಗೃತಿ ಆಂದೋಲನ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಮಾತನಾಡಿ, ಜಲಮೂಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಜಲಮಾಲಿನ್ಯ ತಡೆಯ ಬೇಕು ಎಂದು ಸಲಹೆ ನೀಡಿದರು.
ಕೆರೆ, ಬಾವಿ, ನದಿ ಮೂಲಗಳಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮಾಡಬಾರದು. ಮಣ್ಣಿನ ಗಣೇಶ ಮಾಡುವ ಮೂಲಕ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಕಿವಿಮಾತು ಹೇಳಿದರು.
ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಜಾಗೃತಿ ಆಂದೋಲನ ಜಿಲ್ಲಾ ಸಂಚಾಲಕರಾದ ಟಿ.ಜಿ. ಪ್ರೇಮ್‍ಕುಮಾರ್, ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯನ್ನು ತ್ಯಜಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸ ಬೇಕೆಂದರು.
ಇದೇ ಸಂದರ್ಭ ಪರಿಸರ ಜಾಗೃತಿ ಮೂಡಿಸುವ ಕರಪತ್ರಗಳನ್ನು ಉದ್ಯಮಿ ಬಿ.ಆರ್. ನಾಗೇಂದ್ರ ಪ್ರಸಾದ್ ಬಿಡುಗಡೆಗೊಳಿಸಿದರು.
ಮಣ್ಣಿನ ಗಣಪತಿ ರಚನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಪಿ. ನಾಗೇಶ್, ಮುಖ್ಯೋಪಧ್ಯಾಯರಾದ ಬಿ.ಎನ್. ಪುಷ್ಪ, ಕರಾವಿಪ ಪ್ರಮುಖರಾದ ಎಂ.ಇ. ಮೊಯಿದ್ದೀನ್, ಶ್ರೀಹರ್ಷ, ರೋಟರಿ ಪ್ರಮುಖರಾದ ಕೆ.ಪಿ. ಚಂದ್ರಶೇಖರ್ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಇದ್ದರು.