ಗೋಣಿಕೊಪ್ಪಲು, ಆ.22: ಸ್ವಾತಂತ್ರ್ಯ ಬಂದ ನಂತರ 1958 ರಲ್ಲಿ ಕೃಷಿ ಪ್ರಧಾನ ರಾಷ್ಟ್ರದಲ್ಲಿ ಭತ್ತದ ಉತ್ಪಾದನೆಗೆ ಒತ್ತು ನೀಡಲು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿ ಕಲ್ಲಳ ವನ್ಯಜೀವಿ ವಲಯಕ್ಕೆ ಸೇರಿದ ವಡ್ಡರಮಾಡು ಕಟ್ಟೆ ಮೂಲಕ ಕಾಡುಪ್ರಾಣಿಗಳ ಬಾಯಾರಿಕೆ ತಣ್ಣಿಸುವ ನಿಟ್ಟಿನಲ್ಲಿ ಸುಮಾರು 28 ಎಕರೆ ಪ್ರದೇಶದಲ್ಲಿ ಬೃಹತ್ ಕೆರೆಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಈ ಬಾರಿಯ ಆಗಸ್ಟ್ ತಿಂಗಳ ಕುಂಭದ್ರೋಣ ಮಳೆಗೆ ಕಟ್ಟೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಲ್ಲಲ್ಲಿ ಕುಸಿತ ಉಂಟಾಗಿದೆ. ಮತ್ತೊಂದು ಮಹಾಮಳೆ ಬಂದಲ್ಲಿ ಕಟ್ಟೆ ತುಂಬಿ ಒಡೆದು ಹೋಗುವ ಸಾಧ್ಯತೆ ಇದ್ದು ತಪ್ಪಲಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನೆರೆಯ ಭೀತಿ ಎದುರಾಗಿದೆ.ಹಾಗೇನಾದರೂ ವಡ್ಡರಮಾಡು ಕಟ್ಟೆ ನೆರೆಯ ಒತ್ತಡದಿಂದ ಸ್ಪೋಟಗೊಂಡಲ್ಲಿ ನೂರಾರು ಎಕರೆ ಕೃಷಿ ಭೂಮಿಗಳು ಜಲಾವೃತಗೊಂಡು ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಒಳಗಾಗಲಿದೆ.
(ಮೊದಲ ಪುಟದಿಂದ) ಕಲ್ಲಳ ಅರಣ್ಯ ಪ್ರದೇಶದಲ್ಲಿ ಬೀಳುವ ಮಳೆನೀರು ನೇರವಾಗಿ ವಡ್ಡರಮಾಡು ಕಟ್ಟೆಯನ್ನು ಸೇರುತ್ತದೆ. ಕೆರೆಯಲ್ಲಿ ನೀರು ತುಂಬುವ ಸಂದರ್ಭ ಒತ್ತಡ ನಿಭಾಯಿಸಲು ಕಟ್ಟೆಯ ಒಂದು ಭಾಗದ ತಗ್ಗು ಪ್ರದೇಶದಲ್ಲಿ ತೂಬು ನಿರ್ಮಾಣ ಮಾಡಲಾಗಿದೆ. ಇದೇ ಪ್ರಥಮ ಬಾರಿಗೆ ವಡ್ಡರಮಾಡು ಕಟ್ಟೆ ವಾರದ ಮಳೆಗೆ ತುಂಬಿ ದಾಖಲೆ ನಿರ್ಮಿಸಿದ್ದು, ಆ.2 ರಿಂದಲೇ ತೂಬಿನ ಗೇಟನ್ನು ತೆಗೆದು ನೀರನ್ನು ಹೊರಬಿಡಲಾಗಿತ್ತು.
ವಾರದ ಅವಧಿಯಲ್ಲಿ ಸುರಿದ ಸುಮಾರು 46.64 ಇಂಚು ಮಳೆಯಿಂದಾಗಿ ಈ ಭಾಗದಲ್ಲಿ ಈಗಾಗಲೇ ಸುಮಾರು 70 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಒಟ್ಟು 89.90 ಇಂಚು ಮಳೆ ದಾಖಲಾಗಿತ್ತು. ನೀರು ಬಿಡುವ ‘ಗೇಟ್ ವಾಲ್ವ್’ ತೆರೆದ ಹಿನ್ನೆಲೆ ಕಟ್ಟೆಯ ತಳಭಾಗದಲ್ಲಿರುವ ತೀತಿರ ಜಾನ್ಸಿ ಎಂಬವರಿಗೆ ಸೇರಿದ ಮೂರು ಎಕರೆ ಕಾಫಿ ತೋಟ ಕುಸಿತಗೊಂಡಿದೆ. ಸುಮಾರು ನಾಲ್ಕು ಕೆರೆಗಳಲ್ಲಿ ಸಾಕಲಾದ ಸಾವಿರಾರು ಮೀನುಗಳು, ವಡ್ಡರಮಾಡು ಕಟ್ಟೆಗೆ ಬಿಡಲಾದ ಮೀನುಗಳು ಪ್ರವಾಹದಲ್ಲಿ ಕೊಚ್ಚಿಹೋಗಿ ಲಕ್ಷ್ಮಣ ತೀರ್ಥ ಸೇರಿದೆ. ಈ ಭಾಗದ ಹಲವರ ಭತ್ತದ ಗದ್ದೆಗಳು, ಕಾಫಿ, ಅಡಿಕೆ ತೋಟಗಳು ಪ್ರವಾಹದಿಂದಾಗಿ ನಷ್ಟ ಅನುಭವಿಸಿದೆ. ಒಟ್ಟಾರೆ ಮುಂದೆ ವಡ್ಡರಮಾಡು ಕಟ್ಟೆ ಒಡೆದು ಹೋದರೆ ‘ಏನಪ್ಪಾ ಗತಿ’ ಎಂದು ಇಲ್ಲಿನ ಕೃಷಿಕ ವರ್ಗ ಆತಂಕಕ್ಕೆ ಒಳಗಾಗಿವೆ.
ಈ ಹಿಂದೆ ವಡ್ಡರಮಾಡು ಕಟ್ಟೆಯನ್ನು ಲೋಕೋಪಯೋಗಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ್ದು 0.008 (8 ಎಂ.ಸಿ.ಎಫ್.ಟಿ) ಟಿ.ಎಂ.ಸಿ.ನೀರು ನಿಲ್ಲುತ್ತದೆ ಎನ್ನಲಾಗಿದೆ. ಇದೀಗ ವಡ್ಡರಮಾಡು ಕಟ್ಟೆಯ ದುರಸ್ಥಿ ಕಾರ್ಯ, ನೂತನ ತಡೆಗೋಡೆ ನಿರ್ಮಾಣ ಮತ್ತು ಹೂಳೆತ್ತಲು ಸುಮಾರು ರೂ.1 ಕೋಟಿಗೂ ಅಧಿಕ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ. ಆದರೆ, ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಸಣ್ಣ ನೀರಾವರಿ ಇಲಾಖಾಧಿಕಾರಿಗಳು ಕಾಮಗಾರಿ ವೆಚ್ಚವನ್ನು ಸರಿಯಾಗಿ ಅಂದಾಜಿಸದೆ ಜಿಲ್ಲಾಧಿಕಾರಿಗಳಿಗೆ ಸುಮಾರು ರೂ.50 ಲಕ್ಷ ಅಂದಾಜು ವೆಚ್ಚ ಸಲ್ಲಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಹೂಳು ತುಂಬಿರುವ ಹಿನ್ನೆಲೆ ಸುಮಾರು 40-50 ಮೀಟರ್ ಆಳದ ಕೆರೆಯಲ್ಲಿ ಇದೀಗ 30 ಮೀಟರ್ ನೀರು ಸಂಗ್ರಹವಾಗಿದೆ ಎನ್ನಲಾಗಿದ್ದು, 5 ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆಯು ಸಮರ್ಪಕವಾಗಿ ಹೂಳೆತ್ತುವ ಕಾಮಗಾರಿ ನಿರ್ವಹಿಸಿಲ್ಲ ಎನ್ನಲಾಗಿದೆ. ಕಟ್ಟೆಯ ಒಂದು ಭಾಗದ ಬುಡದಲ್ಲಿ ವಡ್ಡರಮಾಡು-ಕೊಲ್ಲಿಹಾಡಿಗೆ ತೆರಳುವ ರಸ್ತೆಯನ್ನು ಸುಮಾರು ರೂ.16 ಲಕ್ಷವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಮಾರ್ಪಡಿಸಲಾಗಿದ್ದು. ಮಾಜಿ ಉಸ್ತುವಾರಿ ಮಂತ್ರಿ ಸೀತಾರಾಮ್ ಅವಧಿಯಲ್ಲಿ ಆಪ್ತರಾದ ಕದ್ದಣಿಯಂಡ ಹರೀಶ್‍ಬೋಪಣ್ಣ ಅವರು ಮಲೆನಾಡು ಅಭಿವೃದ್ಧಿ ಯೋಜನೆಯ ಅನುದಾನ ಬಿಡುಗಡೆಗೊಳ್ಳಲು ನೆರವಾಗಿದ್ದರು. ಇದೀಗ ಕಾಂಕ್ರೀಟ್ ರಸ್ತೆಯೂ ಹಾನಿಗೊಳಗಾಗುವ ಸಾಧ್ಯತೆ ಇದೆ.
ವಡ್ಡರಮಾಡು ಕಟ್ಟೆಗೆ ಕೊಟ್ಟಗೇರಿವರೆಗೆ ಸುಮಾರು 4 ಕಿ.ಮೀ.ಕಾಲುವೆ ಅಳವಡಿಸಿ, ನೂರಾರು ಭತ್ತದ ಗದ್ದೆಗೆ ನೀರುಣಿಸಲು ಸರ್ಕಾರ ಉದ್ಧೇಶಿಸಿತ್ತು. ಕಾಲುವೆ ಅಳವಡಿಸಲು ತೀತಿರ ಜಾನ್ಸಿ ಕುಟುಂಬ ತಮ್ಮ ತೋಟದ ಮಾರ್ಗ ಬಿಟ್ಟುಕೊಟ್ಟಿದ್ದರೂ, ಇತರೆ ಕೃಷಿಕರು ಸಹಕರಿಸದ ಹಿನ್ನೆಲೆ ಕಾಲುವೆ ಯೋಜನೆ ಕಳೆದ 60 ವರ್ಷದಿಂದಲೂ ನೆನೆಗುದಿಗೆ ಬಿದ್ದಿದೆ. ಕಾಲುವೆಯನ್ನು ಲಕ್ಷ್ಮಣ ತೀರ್ಥ ನದಿಗೆ ಸೇರುವಂತೆ ಯೋಜನೆ ರೂಪಿಸಲಾಗಿತ್ತು.
ಕಾಲುವೆ ನಿರ್ಮಾಣ ಮಾಡದ ಹಿನ್ನೆಲೆ ಇದೀಗ ಅಲ್ಲೊಂದು ತೋಡು ಉದ್ಭವವಾಗಿದ್ದು, ಕಟ್ಟೆಯ ಹೆಚ್ಚುವರಿ ನೀರು ಮಳೆಗಾಲದಲ್ಲಿ ಪ್ರವಾಹವಾಗಿ ಹರಿದು ಲಕ್ಷ್ಮಣ ತೀರ್ಥ ಸೇರುತ್ತಿದೆ.
ಈಗಾಗಲೇ ಕಟ್ಟೆ ಬಿರುಕುಗೊಂಡಿರುವದನ್ನು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕಾಂತರಾಜ್ ಮತ್ತು ಕಿರಿಯ ಅಭಿಯಂತರ ರಫೀಕ್ ಅವರುಗಳು ಆ.15ರಂದು ಖುದ್ದು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.
ವಡ್ಡರಮಾಡು ಕಟ್ಟೆಯ 0.77 ಎಕರೆ ಜಾಗ ಕಂದಾಯ ಇಲಾಖೆಗೆ ಒಳಪಟ್ಟಿದ್ದರೆ, ಉಳಿದ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಇಲ್ಲಿ ಕಟ್ಟೆ ದುರಸ್ಥಿ ಹಾಗೂ ಹೂಳೆತ್ತಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂಬ ಆರೋಪವೂ ಇದೆ. ಸುಮಾರು 150 ಮೀಟರ್ ಉದ್ದದ ಕಟ್ಟೆಯ ಸಮರ್ಪಕ ಪುನರ್‍ನಿರ್ಮಾಣಕ್ಕೆ ರೂ.1 ಕೋಟಿಗೂ ಅಧಿಕ ವೆಚ್ಚ ತಗುಲಲಿದೆ. ಕಟ್ಟೆಯಲ್ಲಿ ನೀರು ಇಳಿಮುಖಗೊಂಡ ನಂತರ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆ ನಡುವಿನ ಬಿಕ್ಕಟ್ಟು ಶಮನವಾಗಬೇಕಾಗಿದೆ. ಇದೀಗ ರೂ.50 ಲಕ್ಷ ಬಿಡುಗಡೆಗೊಂಡರೂ ಕಾಮಗಾರಿ ಹಂತ ಹಂತವಾಗಿ ಕೈಗೊಳ್ಳಲು ಅವಕಾಶವಿದೆ.
ಉದ್ದೇಶಿತ ವಡ್ಡರಮಾಡು ಕಟ್ಟೆಯ ಮಾರ್ಗದ ರಸ್ತೆಯನ್ನು ಕೊಲ್ಲಿಹಾಡಿಗೆ ತೆರಳುವ ನೂರಾರು ಗಿರಿಜನರು ಹಾಗೂ ಕಟ್ಟೆಯ ತಪ್ಪಲಲ್ಲಿ ವಾಸವಿರುವ ತೀತಿರ ಜಯ, ಮಾಪಂಗಡ ಗೋಪಿ, ಮಲ್ಲೇಂಗಡ ಶಶಿಮಣಿ, ಚೆರಿಯಂಡ ದೊರೆ, ಕಳ್ಳಿಚಂಡ ದೀಪಕ್, ಚಿರಿಯಪಂಡ ಬೋಪಯ್ಯ, ಜಿ.ಟಿ.ಬೋಪಯ್ಯ ಮತ್ತು ಕಾಟಿಮಾಡ ಕುಟುಂಬಸ್ಥರು ಒಳಗೊಂಡಂತೆ 50ಕ್ಕೂ ಅಧಿಕ ಕೃಷಿಕರು ಅವಲಂಬಿಸಿದ್ದು, ಕಟ್ಟೆ ಕುಸಿತಗೊಂಡಲ್ಲಿ ಮುಂದೆ ನಿರಂತರವಾಗಿ ಈ ಭಾಗದ ಜನತೆ ಪ್ರವಾಹದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಖುದ್ದು ವೀಕ್ಷಣೆ ಮಾಡಿ, ತುರ್ತು ತಡೆಗೋಡೆ ಇತ್ಯಾದಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ತೀತಿರ ಜಯ, ಚೋಂದಮ್ಮ, ಜಾನ್ಸಿ, ಮಾಪಂಗಡ ಗೋಪಿ ಮುಂತಾದ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಡ್ಡರಮಾಡು ಕಟ್ಟೆಯಲ್ಲಿ ಬೇಸಿಗೆಯಲ್ಲಿಯೂ ಅತ್ಯಧಿಕವಾಗಿ ನೀರು ಸಂಗ್ರಹವಾಗುವ ಹಿನ್ನೆಲೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಆನೆ,ಹುಲಿ,ಜಿಂಕೆ,ಕಾಟಿ ಇತ್ಯಾದಿ ಪ್ರಾಣಿ, ಪಕ್ಷಿಗಳಿಗೂ ಬಾಯಾರಿಕೆ ನೀಗಿಸುವ ಜಲಮೂಲವಾಗಿದೆ.
ವರದಿ:- ಟಿ.ಎಲ್.ಶ್ರೀನಿವಾಸ್