ಮಡಿಕೇರಿ ಆ.21 :ಪಕ್ಷನಿಷ್ಠೆಯನ್ನು ಮೆರೆಯುತ್ತಾ ಜನಪರ ಕಾಳಜಿ ಹೊಂದಿರುವ ಮಡಿಕೇರಿ ವಿಧಾನಾಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸೋಮವಾರಪೇಟೆ ತಾಲೂಕು ಬಿಜೆಪಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಮವಾರಪೇಟೆ ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್.ಸೋಮೇಶ್ ಐದು ಬಾರಿ ಶಾಸಕರಾಗಿ ಜಿಲ್ಲೆಯ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಾ ಜನಮೆಚ್ಚುಗೆ ಗಳಿಸಿರುವ ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹೊರ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ಜವಾಬ್ದಾರಿ ನೀಡಿದರೆ ಕೊಡಗಿನ ಸಮಸ್ಯೆಗಳು ಸುಲಭವಾಗಿ ಅರ್ಥವಾಗುವದಿಲ್ಲವೆಂದ ಅವರು, ಎರಡು ವರ್ಷಗಳ ಕಾಲ ಜಿಲ್ಲೆಯನ್ನು ಕಾಡಿದ ಅತಿವೃಷ್ಟಿ ಪರಿಸ್ಥಿತಿಯನ್ನು ಶಾಸಕ ಅಪ್ಪಚ್ಚುರಂಜನ್ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು. ಕಳೆದ ವರ್ಷ ವಿದೇಶದಲ್ಲಿದ್ದ ಶಾಸಕರು ಮಹಾಮಳೆಯಿಂದ ಜಿಲ್ಲೆ ಸಂಕಷ್ಟದಲ್ಲಿದೆ ಎಂದು ಮಾಹಿತಿ ದೊರೆತ ತಕ್ಷಣ ಮರಳಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಪಕ್ಷನಿಷ್ಠೆ ಮತ್ತು ಜನಪರ ಕಾಳಜಿ ಹೊಂದಿರುವ ಅಪ್ಪಚ್ಚುರಂಜನ್‍ರಿಗೆ ಮೊದಲ ಸುತ್ತಿನಲ್ಲೇ ಸಚಿವ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆಗಳಿತ್ತು. ಆದರೆ ನಿರೀಕ್ಷೆ ಹುಸಿಯಾಗಿರುವದರಿಂದ ಬೇಸರವಾಗಿದೆ ಎಂದು ತಿಳಿಸಿದ ಸೋಮೇಶ್, ಮುಂದೆ ಸಚಿವ ಸಂಪುಟ ವಿಸ್ತರಿಸುವ ಸಂದರ್ಭ ಮುಖ್ಯಮಂತ್ರಿಗಳು ಶಾಸಕರ ಅನುಭವ ಮತ್ತು ಹಿರಿತನವನ್ನು ಗಮನಿಸಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ವರದಾ ಮಾತನಾಡಿ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಹತ್ತಿರದಿಂದ ಬಲ್ಲವರಾಗಿರುವ ಅಪ್ಪಚ್ಚುರಂಜನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಪ್ರಗತಿಯನ್ನು ಸಾಧಿಸಲಿದೆ ಎಂದರು. ಐದು ಬಾರಿ ಶಾಸಕರಾಗಿರುವ ಇವರು ಎಲ್ಲೂ ಸ್ವಜನ ಪಕ್ಷಪಾತ ಮತ್ತು ಹಣ ದುರುಪಯೋಗ ಮಾಡಿಲ್ಲ. ಮಾಜಿ ಶಾಸಕರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ತೋರಿದ ಕಾಳಜಿ ಬಿಜೆಪಿಯ ಭದ್ರಕೋಟೆ ಕೊಡಗಿನ ಶಾಸಕರ ಬಗ್ಗೆ ತೋರದಿರುವದು ದು:ಖ ತಂದಿದೆ ಎಂದು ವರದಾ ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮನುರೈ, ಉಪಾಧ್ಯಕ್ಷ ಹರಗ ಉದಯ, ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಕಿಬ್ಬೆಟ್ಟ ಮಧು ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಸಿ.ಶರತ್ ಉಪಸ್ಥಿತರಿದ್ದರು.
ಕೊಡವ ಸಮಾಜಗಳ ಒಕ್ಕೂಟ ಒತ್ತಾಯ
ಮಡಿಕೇರಿ : ದೇಶದ ವಿವಿಧ ಕ್ಷೇತ್ರಗಳಿಗೆ ಕೊಡವ ಸಮುದಾಯವು ತನ್ನದೇ ಆದ ಕೊಡುಗೆÀಗಳನ್ನು ನೀಡಿದ್ದು, ರಾಜಕೀಯ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಕಳಂಕ ರಹಿತ ಜನಪ್ರತಿನಿಧಿ ಎಂದು ಹೆಸರಾಗಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡದೆ ಇರುವದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡವ ಸಮಾಜಗಳ ಒಕ್ಕೂಟ, ಮುಂದಿನ ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ನೀಡಲೇಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಪಕ್ಷದ ವರಿಷ್ಟರಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುವದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಕೊಡವ ಸಮುದಾಯದ ಕಡೆಗಣನೆ ಸರಿಯಲ್ಲ, ಕೆಲವು ವರ್ಷಗಳ ಹಿಂದೆ ಎಂ.ಎಂ.ನಾಣಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಬಿಟ್ಟರೆ, ನಂತರ ಕೇವಲ ಹತ್ತು ತಿಂಗಳು ಮಾತ್ರ ಅಪ್ಪಚ್ಚುರಂಜನ್ ಅವರು ಉಸ್ತುವಾರಿ ಸಚಿವರಾಗಿದ್ದರು. ಉಳಿದಂತೆ ಎಲ್ಲಾ ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರೇ ಆಗಿದ್ದು, ಜಿಲ್ಲೆಗೆ ಯಾವದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರಿಗೇ ಸಚಿವ ಸ್ಥಾನ ನೀಡುವದು ಸೂಕ್ತವೆಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲು ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಬಾರಿಯೂ ಕಡೆಗಣಿಸಿರುವದು ಅತೀವ ನೋವು ತಂದಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆ ಮತ್ತು ಕೊಡವ ಸಮುದಾಯ ಸಂಕಷ್ಟದಲ್ಲಿರುವ ಇಂತಹ ಪರಿಸ್ಥಿತಿಯಲ್ಲಿ ಕೊಡವ ಪ್ರತಿನಿಧಿಯೊಬ್ಬರಿಗೆ ಸಚಿವ ಸ್ಥಾನ ನೀಡಿ ಪ್ರೋತ್ಸಾಹಿಸಬೆÉೀಕಾಗಿತ್ತು. ರಾಜ್ಯದ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿರುವಾಗ ಕೊಡವರನ್ನು ಯಾಕೆ ಕಡೆಗಣಿಸಿದರು ಎಂದು ಪ್ರಶ್ನಿಸಿದರು.
ಶೇ.95 ರಷ್ಟು ಕೊಡವರು ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದ್ದಾರೆ. ಲೋಕಸಭಾ ಚುಣಾವಣೆಯಲ್ಲಿ ಪ್ರತಾಪಸಿಂಹ ಅವರು ಕೊಡಗಿನಿಂದಲೆ 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಹೀಗಿದ್ದರೂ ಕೊಡವ ಸಮುದಾಯದ ಕಡೆಗಣನೆ ಮುಂದುವರೆದಿದೆ. ನಾವುಗಳು ಬಿಜೆಪಿ ಪರ ಇರುವದೇ ನಮಗೆ ಮಾರಕವೇ ಎಂದು ಪ್ರಶ್ನಿಸಿದ ಅವರು, ಮುಂದಿನ ಸಲವಾದರು ಅಪ್ಪಚ್ಚುರಂಜನ್ ಅವರಿಗೆ ಸಚಿವ ಸ್ಥಾನ ನೀಡಲಿ ಎಂದು ಒತ್ತಾಯಿಸಿದರು.
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಮಾತನಾಡಿ, ಶಾಸಕ ಅಪ್ಪಚ್ಚು ರಂಜನ್ ಅವರು 5 ಬಾರಿ ಹಾಗೂ ಕೆ.ಜಿ.ಬೋಪಯ್ಯ ಅವರು 4 ಬಾರಿ ಶಾಸಕರಾಗಿದ್ದು, ಯಾರಿಗೂ ಸಚಿವ ಸ್ಥಾನ ನೀಡದಿರುವದು ಬೇಸರ ತಂದಿದೆ. ಬೋಪಯ್ಯ ಅವರಿಗೆ ಸ್ಪೀಕರ್ ಸ್ಥಾನವನ್ನೂ ನೀಡಲಿಲ್ಲವೆಂದು ಹೇಳಿದ ಅವರು, ಸಂಪುಟ ವಿಸ್ತರಣೆ ಸಂದರ್ಭ ಇಬ್ಬರಿಗೂ ಸಚಿವ ಸ್ಥಾನ ನೀಡಲಿ ಎಂದು ಒತ್ತಾಯಿಸಿದರು.
ಸುದ್ದಿಗೊಷ್ಠಿಯಲ್ಲಿ ಸೋಮವಾರಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಬಿ.ಕೆ.ಪೂಣಚ್ಚ, ಮೈಸೂರು ಕೊಡವ ಸಮಾಜದ ಮಚ್ಚಂಡ ಪ್ರಕಾಶ್ ಹಾಗೂ ಮಾದಾಪುರ ಕೊಡವ ಸಮಾಜದ ಸಚ್ಚಿ ಕಾಳಪ್ಪ ಉಪಸ್ಥಿತರಿದ್ದರು.