ಗೋಣಿಕೊಪ್ಪ ವರದಿ, ಆ. 20: ಸರ್ಕಾರದಿಂದ ಆರ್ಥಿಕ ಸಹಕಾರ ವಿಲ್ಲದೆ ವ್ಯಾಪಾರಿ ಸದಸ್ಯರನ್ನು ಒಳಗೊಂಡಿರುವ ಗೋಣಿಕೊಪ್ಪ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಪಡೆದುಕೊಂಡಿರುವ ಸದಸ್ಯರ ಸಾಲ ಮನ್ನಾ ಮಾಡಲು ಸಂಘದಲ್ಲಿ ಅವಕಾಶವಿಲ್ಲ ಎಂದು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ತಿಳಿಸಿದ್ದಾರೆ.

ಪಿಗ್ಮಿ ಸಾಲ ಪಡೆದ ಶ್ರೀಮಂಗಲ ವ್ಯಾಪ್ತಿಯ ಸದಸ್ಯರು ಈ ಬಗ್ಗೆ ಒತ್ತಾಯಿಸಿದ್ದು, ಸರ್ಕಾರ ಸಾಲಮನ್ನಾ ಆರ್ಥಿಕ ನೆರವು ನೀಡಿದರೆ ಮಾತ್ರ ಮನ್ನಾ ಯೋಜನೆ ಅನುಷ್ಠಾನ ಸಾಧ್ಯ. ಸರ್ಕಾರದಿಂದ ಆರ್ಥಿಕ ಸಹಕಾರವಿಲ್ಲದೆ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಿಗ್ಮಿ ಸಾಲ ಪಡೆದ ಸದಸ್ಯರುಗಳು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಮಹಾಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಆ ಭಾಗದಲ್ಲಿನ ಸಾಲ ಸುಸ್ತಿದಾರರು, ಜಾಮೀನುದಾರರು ಕೂಡ ಸುಸ್ತಿಯಾಗಿ ರುವದರಿಂದ ಸಾಲ ಕಟ್ಟಬೇಕಾಗಿದೆ. ಸದಸ್ಯರಿಂದ ಸಂಗ್ರಹಿಸಿದ ಠೇವಣಿ, ಸಾಲದ ಲಾಭ ಹಣ, ನಿರಖು ಠೇವಣಿ ಹೊಂದಿಸಿ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಮನ್ನಾ ಮಾಡಲು ಅವಕಾಶವಿಲ್ಲ. ಸಾಲ ಪಡೆದವರು ಸರ್ಕಾರವನ್ನು ಒತ್ತಾಯಿಸಿ ಸರ್ಕಾರ ಆರ್ಥಿಕ ಸಹಕಾರ ನೀಡಿದರೆ ಮನ್ನಾ ಮಾಡಲು ಸಾಧ್ಯವಿದೆ. ಬಡ್ಡಿ ಕಟ್ಟುವ ಮೂಲಕ ಸಾಲ ನವೀಕರಣಕ್ಕೂ ಅವಕಾಶ ನೀಡಲಾಗಿದೆ. ಇದರಿಂದ ಸಾಕಷ್ಟು ಸದಸ್ಯರಿಗೆ ಸಹಾಯವಾಗಿದೆ ಎಂದು ತಿಳಿಸಿದರು.

ಪಿಗ್ಮಿ ಸಾಲ ಪಡೆದವರು ಸಾಲ ಕಟ್ಟ ಬೇಕಾಗಿದೆ. ಮನ್ನಾ ಒತ್ತಾಯ ಮಾಡುವದರಿಂದ ಸಾಲ ಮರುಪಾವತಿ ಮಾಡಿರುವ ಸದಸ್ಯರಿಗೆ ಬೇರೆ ರೀತಿಯ ಸಂದೇಶ ನೀಡಿದಂತಾಗುತ್ತದೆ ಎಂದು ನಿರ್ದೇಶಕ ಪೊನ್ನಿಮಾಡ ಸುರೇಶ್ ಹೇಳಿದರು.

ಉಪಾಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಮಾತನಾಡಿ, ಸರ್ಕಾರದ ಹಣದಲ್ಲಿ ಬ್ಯಾಂಕ್ ನಡೆಯುತ್ತಿಲ್ಲ. ಎಲ್ಲಾ ಸದಸ್ಯರುಗಳು ಕಟ್ಟಿ ಬೆಳೆಸಿದ ಬ್ಯಾಂಕ್ ಬೆಳೆಯಲು ಎಲ್ಲಾರ ಸಹಕಾರ ಅಗತ್ಯವಿದೆ. ಮನ್ನಾಕ್ಕಾಗಿ ಒತ್ತಾಯಿಸುವುದು ಸರಿಯಲ್ಲ ಎಂದರು.

ನಿರ್ದೇಶಕ ಬಿ. ಎನ್. ಪ್ರಕಾಶ್ ಮಾತನಾಡಿ, ಶ್ರೀಮಂಗಲ ಕೇಂದ್ರದಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದ್ದು, ಸಾಲ ಕಟ್ಟುವದು ಸಂಪ್ರದಾಯವಾಗಿದೆ. ಇದನ್ನು ಪಾಲಿಸಬೇಕಿದೆ ಎಂದರು. ಗೋಷ್ಠಿಯಲ್ಲಿ ನಿರ್ದೇಶಕರಾದ ನಾಮೇರ ದೇವಯ್ಯ, ಎ.ಜೆ. ಬಾಬು, ಉಮರ್, ಧ್ಯಾನ್ ಸುಬ್ಬಯ್ಯ, ಪ್ರಭಾರ ಕಾರ್ಯದರ್ಶಿ ಬಿ. ಇ. ಕಿರಣ್ ಉಪಸ್ಥಿತರಿದರು.