ಮಡಿಕೇರಿ, ಆ. 20 : ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ ಈ ಹಿಂದೆ ರಿವರ್ ರ್ಯಾಫ್ಟಿಂಗ್ ನಡೆಸಿಕೊಂಡು ಬರುತ್ತಿದ್ದ 10 ರ್ಯಾಫ್ಟಿಂಗ್ ಮಾಲೀಕರಿಗೆ, ಅಗತ್ಯ ದಾಖಲಾತಿಗಳು ಇದ್ದರೂ ರ್ಯಾಫ್ಟಿಂಗ್‍ಗೆ ಅವಕಾಶವನ್ನು ನೀಡುತ್ತಿಲ್ಲವೆಂದು ಮಾಲೀಕರು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರ್ಯಾಫ್ಟಿಂಗ್ ಮಾಲೀಕ ಶಾಂತಕುಮಾರ್ ಜಿ.ಟಿ. ದುಬಾರೆÉಯಲ್ಲಿ 20 ಮಾಲೀಕರಿಗೆ ಮಾತ್ರ ರ್ಯಾಫ್ಟಿಂಗ್‍ಗೆ ಅವಕಾಶವನ್ನು ನೀಡಲಾಗಿದ್ದು, ಈ ಹಿಂದಿನಿಂದಲೂ ರ್ಯಾಫ್ಟಿಂಗ್ ನಡೆಸಿಕೊಂಡು ಬಂದಿರುವ ನಮಗೆ ಅವಕಾಶವನ್ನು ನಿರಾಕರಿಸಲಾಗುತ್ತಿದೆ ಮಾತ್ರವಲ್ಲ, (ಮೊದಲ ಪುಟದಿಂದ) ರ್ಯಾಫ್ಟಿಂಗ್‍ಗೆ ಅವಕಾಶ ಕೋರುವ ಅರ್ಜಿಯನ್ನೂ ಪ್ರವಾಸೋದ್ಯಮ ಇಲಾಖೆಯಲ್ಲಿ ಸ್ವೀಕರಿಸುತ್ತಿಲ್ಲವೆಂದು ಹೇಳಿದರು.ರ್ಯಾಫ್ಟಿಂಗ್ ನಡೆಸಲು ಅಗತ್ಯವಾದ ಎಲ್ಲಾ ದಾಖಲಾತಿಗಳನ್ನು ಹೊಂದಿದ್ದರೂ ಅವಕಾಶವನ್ನು ನಿರಾಕರಿಸಲು ಪ್ರವಾಸೋದ್ಯಮ ಇಲಾಖೆಯ ಕೆಲವು ಅಧಿಕಾರಿಗಳೇ ಕಾರಣವೆಂದು ಆರೋಪಿಸಿದರು.ಈ ಹಿಂದೆ ದುಬಾರೆಯಲ್ಲಿ 110 ರ್ಯಾಫ್ಟರ್‍ಗಳು ಕಾರ್ಯನಿರ್ವಹಿಸುತ್ತಿದ್ದರೆ, ಅಷ್ಟೇ ಸಂಖ್ಯೆಯ ಗೈಡ್‍ಗಳು ಕಾರ್ಯನಿರ್ವಹಿಸುತ್ತಿದ್ದರು. ಇವರುಗಳು ಸ್ಥಳೀಯರೇ ಆಗಿದ್ದರು, ಆದರೆ ಪ್ರಸ್ತುತ ಹೊರ ಜಿಲ್ಲೆಯ ಗೈಡ್‍ಗಳಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಸ್ಥಳೀಯ ಗೈಡ್‍ಗಳು ತೊಂದರೆಗೆ ಸಿಲುಕಿದ್ದಾರೆ. ಪೊಲೀಸ್ ಕೇಸ್ ಎದುರಿಸುತ್ತಿರುವ ಮಾಲೀಕರಿಗೆ ಹಾಗೂ ಗೈಡ್‍ಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ದುಬಾರೆ ರ್ಯಾಪ್ಟಿಂಗ್‍ಗೆ ಜಿಲಾಧಿಕಾರಿಗಳ ಅಧ್ಯಕ್ಷತೆಯ ಉಸ್ತುವಾರಿ ಸಮಿತಿ ಇದೆ. ರ್ಯಾಫ್ಟಿಂಗ್‍ಗೆ ನಮಗೂ ಅವಕಾಶ ನೀಡುವಂತೆ ಈ ಸಮಿತಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ಪ್ರವಾಸೋದ್ಯಮ ಇಲಾಖೆ ಇಲ್ಲಿಯವರೆಗೆ ಅವಕಾಶವನ್ನು ನೀಡಿಲ್ಲ. ಇದರಿಂದ ರ್ಯಾಫ್ಟಿಂಗ್‍ನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಶಾಂತಕುಮಾರ್ ಜಿ.ಟಿ. ಅಸಹಾಯಕತೆ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಇತರ ಮಾಲೀಕರಾದ ದೇವೇಂದ್ರ ಬಿ.ವೈ., ವಿಜೇಶ್ ಸಿ.ವಿ. ಹಾಗೂ ಸಬಾಸ್ಟಿನ್ ಎ.ಜೆ. ಮಾತನಾಡಿ ರ್ಯಾಫ್ಟಿಂಗ್‍ಗೆ ಅವಕಾಶ ಕೋರಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವದಲ್ಲದೆ, ತಮ್ಮ ಅರ್ಜಿಯನ್ನೇ ಸ್ವೀಕರಿಸದ ಇಲಾಖಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವದಾಗಿ ತಿಳಿಸಿದರು.