ಸೋಮವಾರಪೇಟೆ, ಆ. 20: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ರೋಟರಿ ಸಂಸ್ಥೆಯ ವತಿಯಿಂದ 25 ಮನೆಗಳನ್ನು ನಿರ್ಮಿಸಿ ಕೊಡಲಾಗುವದು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಜೋಸೆಫ್ ಮ್ಯಾಥ್ಯೂ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರಿಗೆ ಮನೆ ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾ ಗುವದು. 2018ರ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಹಾನಿಯಾಗಿದ್ದು, ಮಾದಾಪುರ ಸಮೀಪದ ಗರಗಂದೂರಿನಲ್ಲಿ 25 ಮನೆಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ನೀಡಲಾಗಿದೆ ಎಂದರು.

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ, ಪ್ರಸಕ್ತ ಸಾಲಿನಲ್ಲಿ ರೋಟರಿ ಜಿಲ್ಲೆಯಲ್ಲಿ “ಜೀವನ ಸಂಧ್ಯಾ’ ಮತ್ತು ‘ಜೀವ ಉಳಿಸಿ’ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಿರಿಯ ಜೀವಗಳನ್ನು ಗೌರವಿಸಬೇಕು. ವೃದ್ಧರ ಸ್ಥಿತಿಗತಿಗಳ ಬಗ್ಗೆ ಗಮನಹರಿಸಿ ಅವರಿಗೆ ಪ್ರೀತಿ ವಿಶ್ವಾಸವನ್ನು ತೋರುವ ಕಾರ್ಯಕ್ರಮವಾಗಿದೆ ಎಂದು ಮಾಹಿತಿ ನೀಡಿದರು.

ಅಪಘಾತ ನಡೆದ ಸಂದರ್ಭ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವದು, ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವದು. ಗ್ರಾಮೀಣ ಭಾಗದಲ್ಲಿ ಕ್ಯಾನ್ಸರ್ ಕಾಯಿಲೆಗಳ ಬಗ್ಗೆ ಮಾಹಿತಿ ನೀಡುವದು. ಅಲ್ಲದೆ ಯುವಕರಿಗೆ ತರಬೇತಿ ನೀಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವ ಯೋಜನೆಯನ್ನು ರೋಟರಿ ಸಂಸ್ಥೆ ಹಮ್ಮಿಕೊಂಡಿದೆ ಎಂದರು.

ರೋಟರಿ ವತಿಯಿಂದಲೇ ‘ಸಂಚಾರಿ ಪರೀಕ್ಷಾ ಘಟಕ’ ಸ್ಥಾಪನೆ ಮಾಡಲಾಗುವದು. ಪ್ರತಿ ಗ್ರಾಮಗಳಿಗೆ ತೆರಳುವ ವೈದ್ಯರ ತಂಡ, ಕ್ಯಾನ್ಸರ್ ಸೇರಿದಂತೆ ಇತರ ಕಾಯಲೆಗಳ ಬಗ್ಗೆ ಪರೀಕ್ಷೆ ನಡೆಸಿ, ಸೂಕ್ತ ಸಲಹೆ ಹಾಗೂ ಆಗತ್ಯವಿದ್ದರೆ ಚಿಕಿತ್ಸೆ ಕಲ್ಪಿಸಲಾಗುವದು. ಇವೆಲ್ಲಾ ಯೋಜನೆಗಳನ್ನು ರೋಟರಿ ಸದಸ್ಯರ ಸಹಕಾರದಿಂದಲೇ ಜಾರಿಗೊಳಿಸಲಾಗುವದು ಎಂದ ಜೋಸೆಫ್ ಮ್ಯಾಥ್ಯೂ ಅವರು, ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ 25 ಆಯ್ದ ಶಾಲೆಗಳಿಗೆ ಪ್ರಥಮ ಚಿಕಿತ್ಸೆಯ ಆರೋಗ್ಯ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಜಿಲ್ಲಾ ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಕಾರ್ಯದರ್ಶಿ ಹೆಚ್.ಸಿ. ಲೋಕೇಶ್ ಉಪಸ್ಥಿತರಿದ್ದರು.

ಕೈಲ್ ಮುಹೂರ್ತ ಆಚರಣೆ

ಮಡಿಕೇರಿ, ಆ. 20: ಸೂರ್ಲಬ್ಬಿನಾಡು ವ್ಯಾಪ್ತಿಯ ಮಂಕ್ಯ, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮುಟ್ಲು, ಹಮ್ಮಿಯಾಲದಲ್ಲಿ ಕೊಡಗಿನ ಸಾಂಪ್ರದಾಯಿಕ ಕೈಲ್‍ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ನಾಡಿನ ಜನತೆ ಸಂಪ್ರದಾಯದಂತೆ ಕೃಷಿಕಾರ್ಯಕ್ಕೆ ಬಳಸುವ ನೇಗಿಲು, ನೊಗ, ಕತ್ತಿ, ಕೋವಿ ಸೇರಿದಂತೆ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಸಹಭೋಜನದಲ್ಲಿ ತೊಡಗಿಸಿಕೊಂಡರು.

-ಚಿತ್ರ: ನಾಮೇರ ದಿನೇಶ್

ಪತ್ನಿ ಶವ ದೊರೆತಲ್ಲಿ ಅದೇ ಭಾಗ್ಯ..!

ತುಂಬು ಗರ್ಭಿಣಿಯನ್ನು ಬಿಟ್ಟು ಹಾಲು ನೀಡಲು ಮಾಲೀಕರ ಮನೆಗೆ ಹೋಗಿ ಬರುವ ಸಂದರ್ಭದಲ್ಲಿ ಘಟಿಸಿದ ಘನಘೋರ ದುರಂತವೆಂದು ಕಣ್ಣೀರಿಡುತ್ತಾ ತಮ್ಮ ಅನುಭವ ಮತ್ತು ಅವರು ಅನುಭವಿಸುತ್ತಿರುವ ವೇದನೆಯನ್ನು ವಿವರಿಸುತ್ತಾರೆ ತೋರ ಕೋರ್ತಿಕಾಡು ಚೂರಿಕೆಂದುಟ್ಟಿಯ ನಿವಾಸಿ ಹರೀಶ್.

ಕೆದಮಳ್ಳೂರು ಗ್ರಾಮ ಪಂಚಾಯಿತಿ ತೋರ ಗ್ರಾಮ ಕೊರ್ತಿಕಾಡು ಚೂರಿಕೆಂದುಟ್ಟಿಯ ಕೀತಿಯಂಡ ಮಂದಪ್ಪ ಲೈನ್ ಮನೆಯಲ್ಲಿ ವಾಸವಿದ್ದ ಹರೀಶ್ ಮತ್ತು ವೀಣಾ ದಂಪತಿಗಳು. ಹರೀಶ್ ತಂದೆ ದಿ. ಜವರ ಶೆಟ್ಟಿ ಮೂಲತಃ ಪಿರಿಯಾಪಟ್ಟಣ ತಾಲೂಕು ಅಬ್ಬುಟ್ಟೂರು ಗ್ರಾಮದ ನಿವಾಸಿ ತಮ್ಮ 13 ವಯಸ್ಸಿನಲ್ಲಿ ಕೂಲಿ ಕೆಲಸ ಅರಸಿಕೊಂಡು ಕೊಡಗು ಜಿಲ್ಲೆಗೆ ಆಗಮಿಸಿದವರು. ಬೇಸಿಗೆಯಲ್ಲಿ ಕಾಫಿ ಕೊಯ್ಯಲು ನನ್ನ ತಾಯಿಯ ತಮ್ಮ ಅಂದರೆ ಮಾವನೊಂದಿಗೆ ಕಾಫಿ ಕೊಯ್ಯಲು ಇಲ್ಲಿಗೆ ಆಗಮಿಸಿದ್ದೆ. ಕಾಫಿ ಕುಯಿಲು ಮುಗಿದ ನಂತರ ಮಾವ ಮತ್ತು ಇತರರು ಊರಿಗೆ ತೆರಳಿದರು. ನಾನು ಇಲ್ಲೆ ಉಳಿದುಕೊಂಡೆ. ಮಂದಪ್ಪ ಅವರು ಇಲ್ಲೆ ತಂಗಲು ತಿಳಿಸಿ ನಾನು ನನ್ನ ಜೀವನವನ್ನು ಆರಂಭಿಸಿದೆ. ಕಾಲ ಕಳೆದಂತೆ ನನಗೆ ನನ್ನ ಮಾಲೀಕರು ತೋಟದ ನಿರ್ವಹಣೆ ಮಾಡಲು ಜವಾಬ್ದಾರಿ ವಹಿಸಿದರು. ತೋಟದ ಕೆಲಸದಲ್ಲಿ ತಲ್ಲೀನನಾದೆ. ತರಕಾರಿ, ಹಸು, ದÀನ, ಕರುಗಳು, ಹಂದಿ ಮತ್ತು ಕೋಳಿ ಸಾಕಲು ಆರಂಭಿಸಿದೆ. ಮಾಲೀಕರು ನನ್ನ ನಿಷ್ಠೆಯನ್ನು ಗುರುತಿಸಿ ತೋಟ ಮಾಡಲು ಹೇಳಿದರು. ಮನೆ ಕಟ್ಟಿಕೊಳ್ಳುವಂತೆ ಹೇಳಿದರು.

ಮುಂದೆ ಸತತ ಪರಿಶ್ರಮದಿಂದ 1.5 ಎಕರೆ ಕಾಫಿ ತೋಟವನ್ನು ಮಾಡಿದೆ. ಕಾಫಿ ಫಸಲು ಬರಲು ಆರಂಭಿಸಿತು. ನನಗೆ ಆದಾಯ ಬರಲು ಆರಂಭಿಸಿದಂತೆ ಮುಂದೆ ಎರಡು ವರ್ಷಗಳು ಕಳೆದಂತೆ ಮನೆ ನಿರ್ಮಾಣ ಮಾಡಲು ಮಾಲೀಕರು ಪ್ರೇರೇಪಿಸಿದರು ಮತ್ತು ಧನ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ನಾನು ನನ್ನ ತೋಟ ಬೇರೆ ಮಾಲೀಕರ ತೋಟ ಬೇರೆ ಎಂದು ಎಂದಿಗೂ ತಿಳಿದುಕೊಳ್ಳದೆ ಸರಿಸಮಾನವಾಗಿ ದುಡಿಯುತಿದ್ದೆ. ಜೀವನ ಮಾರ್ಗವನ್ನು ಕರುಣಿಸಿದ ಮಾಲೀಕರು ದೇವರ ಸಮಾನ ಎಂದು ಭಾವುಕರಾಗಿ ಹೇಳುತ್ತಾರೆ ಹರೀಶ್.

ನಾನು ವಾಸ ಮಾಡುವ ಲೈನ್‍ಮನೆಯಲ್ಲೇ ಅಪ್ಪು ಮತ್ತು ಲೀಲಾಮ್ಮ ನನ್ನ ಪೋಷಕರಂತೆ ನೋಡಿಕೊಳ್ಳುತಿದ್ದರು. ಅವರಿಗೆ ಮಕ್ಕಳಿರಲಿಲ್ಲಾ ಅದೇ ರೀತಿ ನಮ್ಮ ಶಂಕರಣ್ಣ ಆತ್ಮೀಯರಾಗಿದ್ದೆವು. ನಾವುಗಳು ನೋವು, ನಲಿವುಗಳನ್ನು ಹಂಚಿಕೊಳ್ಳುತಿದ್ದೆವು ಎಂದು ಹೇಳುತ್ತಾರೆ ತಮ್ಮ ಲೈನ್ ಮನೆಯ ಕಥೆ.

ಪ್ರಾಣಿ ಪ್ರೀತಿಯನ್ನು ಗುರುತಿಸಿದ ಮಾಲೀಕರು ನನಗೆ ಕೊಟ್ಟಿಗೆ ನಿರ್ಮಾಣ ಮಾಡಿಕೊಟ್ಟರು. ಮುಂದೆ ಅದೇ ಕೊಟ್ಟಿಗೆಯಲ್ಲಿ ನಾಲ್ಕು ಹಸು, ಮೂರು ಕರು, ಮೂರು ಹಂದಿ 40 ಕೋಳಿ ಮತ್ತು ಬಾತುಕೋಳಿ ಸಾಕಿ ಸಲುಹುತಿದ್ದೆ. ಇಂದು ಎಲ್ಲವೂ ಕಣ್ಮೆರೆಯಾಗಿ ಹೋಯಿತು.

ಮನೆ ಕನಸಿನಲ್ಲೇ ಬಾಕಿ

ಸುಂದರವಾದ ಮನೆ ನಿರ್ಮಾಣ ಮಾಡಬೇಕು; ತನ್ನ ಕುಟುಂಬವನ್ನು ಸದಾ ಕಾಲ ಚೆನ್ನಾಗಿ ನೋಡಿಕೊಳ್ಳ ಬೇಕು ಎಂದು ಇಚ್ಛೆಯಿಂದ ತೋಟದ ಒಂದು ಅಂಚಿನಲ್ಲಿ ಮನೆದಳವನ್ನು ಸಿದ್ಧಪಡಿಸಿ ಮನೆ ನಿರ್ಮಾಣ ಮಾಡಲು ಅಡಿಪಾಯ ತೆಗೆದು 2018ರಲ್ಲಿ ಸಿದ್ಧಪಡಿಸಿದ್ದೆ. ಮದುವೆ ಹತ್ತಿರ ಬಂದಿತ್ತು; ಮಳೆಗಾಲ ಕಳೆದ ನಂತರ ಮನೆ ನಿರ್ಮಾಣ ಮಾಡುವಂತೆ ಮನಸ್ಸಾಯಿತು. ಇಂದು ಕೇವಲ ಅಡಿಪಾಯ ಮಾತ್ರ ಬಾಕಿ ಕನಸಿನ ಮನೆ ಕನಸಿನಲ್ಲೇ ಬಾಕಿ ಉಳಿದಂತಾಯಿತು.

ಎರಡು ತಿಂಗಳಿಗೊಮ್ಮೆ ಊರಿಗೆ ತೆರಳುತ್ತಿದ್ದೆ. ಹಬ್ಬ ಹರಿದಿನಗಳಿಗೆ ಊರಿಗೆ ತೆರಳುತ್ತಿದ್ದೆ. ಊರಿನಿಂದ ನಾನಿರುವ ಈ ಸ್ಥಳಕ್ಕೆ ಕುಟುಂಬದವರು ಆಗಮಿಸುತ್ತಿದ್ದರು. ಕಳೆದ ಡಿಸೆಂಬರ್ 9 ರಂದು ನನ್ನ ಸೋದರಮಾವನ ಮಗಳಾದ ವೀಣಾಳನ್ನು ವರಿಸಿದೆ. ವಿವಾಹವು ಪಿರಿಯಾಪಟ್ಟಣದ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಡೆಯಿತು. ವಿವಾಹವಾದ ನಂತರ ಇ ಮನೆಗೆ ಕರಿಸಿಕೊಂಡು ದಾಂಪತ್ಯ ಜೀವನ ಆರಂಭಿಸಿದೆ. ದುರಂತದ ಮುನ್ನ ಅವಳು ತಾಯಿಯಾಗುವ ಸಂತಸದಲ್ಲಿದ್ದಳು. ಅಂದರೆ 6 ತಿಂಗಳ ಗರ್ಭಿಣಿ.

ತಾ. 9ರ ಶುಕ್ರವಾರ ಅದು ಶುಭ ಶುಕ್ರವಾರ ವರಮಾಹಾಲಕ್ಷ್ಮೀ ವ್ರತ ಪೂಜೆ ಮಾಡಬೇಕು, ತಳಿರು ತೋರಣ ಕಟ್ಟಿ ವರವನ್ನು ನೀಡುವ ಲಕ್ಷ್ಮೀಯನ್ನು ಪೂಜಿಸಬೇಕು ಎಂದು ಮನೆಯ ಒಡತಿ ಹೇಳುತ್ತಿದ್ದಳು. ಆದರೇ ವಿಧಿಯಾಟ ‘ಶ್ರಮ ವಹಿಸಿ ಕಟ್ಟಿದ ಸಾಮ್ರಾಜ್ಯವು ಕಮರಿಹೋಯಿತು, ಕಂಡಿದ್ದ ಕನಸುಗಳು ನೂಚ್ಚುನೂರಾಗಿ ಹೋಯಿತು’ ವರ ನೀಡುವ ಲಕ್ಷ್ಮೀ ನನ್ನ ಕುಟುಂಬವನ್ನೇ ಸ್ವೀಕರಿಸಿಬಿಟ್ಟಳು, ದುಃಖದಿಂದ ಹೇಳುತ್ತಾರೆ ಹರೀಶ್.

ಅಂದು ಬೆಳಿಗ್ಗೆ ಹಸು ಹಾಲು ಕರೆದು ದಿನ ನಿತ್ಯದಂತೆ 10.30ಕ್ಕೆ ಮಾಲೀಕರ ಮನೆಗೆ ತೆರಳಿದೆ. ಮಾಲೀಕರ ಮನೆಗೆ ತೆರಳಲು 10 ನಿಮಿಷ ಸಾಕು. ಹಿಂದಿರುಗಿ ನೋಡುತ್ತಿದ್ದಂತೆ ಭಾರೀ ಶಬ್ಧದೊಂದಿಗೆ ಬೆಟ್ಟವು ಕುಸಿಯುತ್ತಿರುವ ಘನ ಘೋರ ಚಿತ್ರ ಕಣ್ಣ ಮುಂದೆ ಸಾಗಿ ಕ್ಷಣ ಮಾತ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಅಡಿಪಾಯ, ಲೈನ್‍ಮನೆಯಲ್ಲಿದ್ದ ನನ್ನ ಪ್ರೀತಿಯ ಪತ್ನಿ ವೀಣಾ, ನಾನು ಪ್ರೀತಿಯಿಂದ ಸಾಕುತ್ತಿದ್ದ ದನ, ಕರುಗಳು, ಹಂದಿ ಮತ್ತು ಕೋಳಿಗಳು ಎಲ್ಲವೂ ಮಣ್ಣಿನಡಿಯಲ್ಲಿ ಹುದುಗಿಹೋಯಿತು. ದಿಕ್ಕು ತೋಚದಂತಾಯಿತು. ಇದೀಗ ನಾನು ಶೂನ್ಯವಾಗಿದ್ದೇನೆ, ಎಲ್ಲವನ್ನೂ ನಾನು ಕಳೆದುಕೊಂಡಿದ್ದೇನೆ. ಘಟನೆ ನಡೆದು ಇಂದಿಗೆ ಹತ್ತು ದಿನಗಳಾಯಿತು. ಕಾಣೆಯಾದ ನನ್ನ ಪತ್ನಿಯನ್ನು ಹುಡುಕುತಿದ್ದೇನೆ ಅಷ್ಟೇ... ಕಂಬನಿಯ ಕೋಡಿಹರಿಯಿತು ಹರೀಶ್ ಅವರ ಕಣ್ಣಿನಲ್ಲಿ...

-ಕಿಶೋರ್ ಕುಮಾರ್ ಶೆಟ್ಟಿ, ವೀರಾಜಪೇಟೆ