ಮಡಿಕೇರಿ, ಆ. 20 : ಕೊಂಡಂಗೇರಿಯ ಮಳೆಹಾನಿ ಸಂತ್ರಸ್ತರಿಗೆ ಭೂದಾನ ಮಾಡಿದ ಹೆಚ್.ಎಂ.ಅಬ್ದುಲ್ಲಾ ಹಾಜಿ ಅವರನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ನಗರದ ವಕ್ಫ್ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ದಾನಿ ಅಬ್ದುಲ್ಲಾ ಹಾಜಿ ಅವರು, ಮಹಾಮಳೆಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದು, ಸಂತ್ರಸ್ತರು ಸಂಕಷ್ಟದಲ್ಲಿದ್ದಾರೆ. ಅಲ್ಲದೇ ಅನೇಕ ಸಂತ್ರಸ್ತರು ಮಂದಿರ, ಮಸೀದಿಗಳಲ್ಲಿ ವಾಸವಿದ್ದು, ಜೀವನ ನಡೆಸಲು ಪರದಾಡುವಂತಾಗಿದೆ. ಪರಿಹಾರ ಕೇಂದ್ರಗಳಿಗೆ ತಾನು ಭೇಟಿ ನೀಡಿದಾಗ ಅನೇಕರು ಕಷ್ಟಪಡುವದನ್ನು ಕಂಡು ಮನನೊಂದು ಜಾಗವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದೆ ಎಂದರು.ಸಂತ್ರಸ್ತರ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ವಕ್ಫ್ ಅಧ್ಯಕ್ಷ ಕೆ.ಎ. ಯಾಕೂಬ್, ಮಳೆಹಾನಿ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಶೀಘ್ರ ಸರಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು.ಮಳೆಯಿಂದ ಹಾನಿಗೊಳಗಾದ ಮಸೀದಿ, ಮದರಸಗಳನ್ನು ತುರ್ತಾಗಿ ಪರಿಶೀಲಿಸಿ
(ಮೊದಲ ಪುಟದಿಂದ) ನಷ್ಟ ಅಂದಾಜು ಮಾಡಿ ವಕ್ಫ್ಬೋರ್ಡ್ಗೆ ಕಳುಹಿಸಲಾಗುವದು. ಹಾನಿಗೊಳಗಾದ ಕಟ್ಟಡಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವದು ಎಂದು ತಿಳಿಸಿದರು.
ಮಹಾಸಭೆ ನಡೆಸದೇ ಇರುವ ಮತ್ತು ಆಡಿಟ್ ಆಗದೇ ಇರುವ ಜಮಾಅತ್ಗಳು ತಕ್ಷಣ ಈ ಕಾರ್ಯವನ್ನು ಪೂರ್ಣಗೊಳಿಸುವಂತೆ ಯಾಕೂಬ್ ಇದೇ ಸಂದರ್ಭ ಮನವಿ ಮಾಡಿದರು.
ವಕ್ಫ್ ಸಮಿತಿ ಸದಸ್ಯ ಅಬ್ದುಲ್ ಅಫಿಲ್ ಸಹದಿ ಮಾತನಾಡಿ, ಸಂತ್ರಸ್ತರ ನೋವಿಗೆ ಸ್ಪಂದಿಸಲು ಮತ್ತಷ್ಟು ಭೂದಾನಿಗಳು ಮುಂದೆ ಬರಬೇಕೆಂದು ಕರೆ ನೀಡಿದರು.
ಮತ್ತೋರ್ವ ಸದಸ್ಯ ಸಿ.ಎಂ.ಹಮೀದ್ ಮೌಲವಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಹಾಮಳೆಯ ಪರಿಣಾಮ ಸಾವಿರಾರು ಜನರು ಮನೆ, ಭೂಮಿ ಕಳೆದುಕೊಂಡು ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ನೆರವು ವಿತರಿಸುವ ಬದಲು ಶಾಶ್ವತ ಪರಿಹಾರಕ್ಕಾಗಿ ಎಲ್ಲರೂ ಶ್ರಮ ಪಡಬೇಕೆಂದು ಸಲಹೆ ನೀಡಿದರು.
ಹಲವರು ಸರಕಾರಿ ಭೂಮಿಯನ್ನು ಅಗತ್ಯಕ್ಕಿಂತ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದು, ಸ್ವಲ್ಪ ಪ್ರಮಾಣದಲ್ಲಾದರು ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ನೀಡಿದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಅಬ್ದುಲ್ ರೆಹಮಾನ್ (ಬಾಪು), ಸದಸ್ಯರಾದ ಅಬ್ದುಲ್ ಶುಕೂರ್, ಎಂ.ಎ.ಮೊಯ್ದು, ಹಂಸ, ಅಬ್ದುಲ್ ಸಮ್ಮದ್, ಎಂ.ಬಿ.ಅಬ್ದುಲ್ ನಾಸೀರ್, ತನ್ವಿರ್ ಅಹಮ್ಮದ್, ಅಬ್ದುಲ್ ರೆಹಮಾನ್, ಮೊಹಮ್ಮದ್ ಹಾಗೂ ವಕ್ಫ್ ಅಧಿಕಾರಿ ಸಾಹಿದ್ ರೆಹಮಾನ್ ಉಪಸ್ಥಿತರಿದ್ದರು.