ಕಣಿವೆ, ಆ. 20 : ಹಿಂದೆಲ್ಲಾ ತಿಂಗಳುಗಟ್ಟಲೇ ಮಳೆ ಎಡಬಿಡದೇ ಸುರಿದರೂ ಕಾವೇರಿ ನದಿಯಲ್ಲಿ ಬಾರದ ಪ್ರವಾಹ ಈಗ ನಾಲ್ಕೇ ದಿನ ಸುರಿದ ಮಳೆಗೆ ಏಕೆ ಬಂತು ? ಎಂಬ ಪ್ರಶ್ನೆ ನದಿ ತಟದ ನಿವಾಸಿಗಳಿಂದ ಹಿಡಿದು ಕೊಡಗಿನ ಬಹುತೇಕ ಜನರನ್ನು ಕಾಡುತ್ತಿದೆ.
ಕಳೆದ ಎರಡು ಎರಡೂವರೆ ದಶಕಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳು ಬಂತೆಂದರೆ ಮುಂದಿನ ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಮುಗಿವ ತನಕವೂ ಮಳೆಯ ನಕ್ಷತ್ರಗಳು ಮಳೆಗಳನ್ನು ಯಥೇಚ್ಛವಾಗಿ ಸುರಿಸುತ್ತಿದ್ದವು.
ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಹ ಎಂಬದು ಹಗಲು ಮುಗಿದು ರಾತ್ರಿ ಕಳೆಯುವದರೊಳಗೆ ನದಿ ದಂಡೆಯ ವಾಸಿಗಳಲ್ಲಿ ತಲ್ಲಣ ಉಂಟುಮಾಡುತ್ತಿರುವದು ಆತಂಕವನ್ನು ಮೂಡಿಸುತ್ತಿದೆ.
ಮರಗಳ ಹನನ : ಕಾವೇರಿ ನದಿ ಅರಣ್ಯ ಪೋಷಿತವಾದ ನದಿ. ಹಿಂದೆ ಕಾವೇರಿ ನದಿ ಅಗಾಧ ಪ್ರಮಾಣದ ಗಿಡ ಮರಗಳಿಂದ ಆವೃತವಾಗಿತ್ತು. ಸಹಜವಾಗಿಯೇ ಅರಣ್ಯಗಳಲ್ಲಿನ ಪ್ರಾಣಿಗಳ ಮತ್ತು ಗಿಡ ಮರಗಳ ತ್ಯಾಜ್ಯಗಳಿಂದ ನದಿಯ ದಂಡೆಯ ಮಣ್ಣಿಗೆ ನಿರಂತರವಾಗಿ ಪೌಷ್ಠಿಕಾಂಶ ಗಳು, ಜೈವಿಕ ಪದಾರ್ಥಗಳು ಮರು ಪೂರೈಕೆ ಆಗುತ್ತಿದ್ದವು.
ಈ ಜೈವಿಕ ಪದಾರ್ಥ, ಅಲ್ಲಿನ ಮಣ್ಣು ನೀರನ್ನು ಹೀರಿ ತನ್ನೊಳಗೆ ಹಿಡಿದಿಟ್ಟುಕೊಳ್ಳುವಂತೆ ಮಾಡಿ ಕಾವೇರಿ ನದಿಯನ್ನು ಪೋಷಿಸುತ್ತಿತ್ತು.
ಆದರೆ ಜನಸಂಖ್ಯೆ ಹೆಚ್ಚಿದಂತೆ ಮರಗಳ ಹನನ ಹೆಚ್ಚಾಯಿತು.
ಇದರಿಂದಾಗಿ ಭೂಮಿಗೆ ಜೈವಿಕಾಂಶ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ತರುವಾಯ ಭೂಮಿ ನೀರನ್ನು ಹೀರುತ್ತಿಲ್ಲ. ಆದ್ದರಿಂದ ಮಳೆಯ ನೀರೆಲ್ಲಾ ಹಾಗೆಯೇ ಹರಿಯುತ್ತಿರುವ ಕಾರಣ ಪ್ರವಾಹಕ್ಕೆ ಕಾರಣವಾಗುತ್ತಿದೆ.
ಕಸದ ತೊಟ್ಟಿಯಾಗುತ್ತಿರುವ ಕಾವೇರಿ ತಟ: ಕಾವೇರಿ ಉಗಮಿಸುವ ತಲಕಾವೇರಿಯಿಂದ ಹಿಡಿದು ನದಿಯು ಹರಿಯುವ ಮಾರ್ಗದ ಉದ್ದಕ್ಕೂ ಇರುವ ಹಳ್ಳಿಗಳು, ಪಟ್ಟಣ ಮತ್ತು ನಗರ ಪ್ರದೇಶಗಳ ಜನರಿಗೆ ಕಾವೇರಿಯ ಪಾವಿತ್ರ್ಯತೆ ಕಾಣದಾಗಿದ್ದು ಕಸದ ತೊಟ್ಟಿಯಂತಾಗಿದೆ.
ಎಲ್ಲಾ ಬಗೆಯ ರಾಶಿ ರಾಶಿಗಟ್ಟಲೇ, ಲೋಡ್ಗಟ್ಟಲೇ ಸಂಗ್ರಹವಾಗುವ ತ್ಯಾಜ್ಯಗಳನ್ನು ನದಿಗೆ ಸುರಿಯುತ್ತಿರುವದರಿಂದ ನದಿಯ ನೀರು ಹರಿವ ಜಾಗ ಕಿರಿದಾಗುತ್ತಿದೆ.
ನದಿಯ ದಂಡೆಯಲ್ಲಿ ನಿಯಮ ಮೀರಿ ತಲೆ ಎತ್ತುತ್ತಿರುವ ಬಡಾವಣೆ ಗಳು, ಬಡಾವಣೆಗಳ ನಿರ್ಮಾಣಕ್ಕಾಗಿ ಅವ್ಯಾಹತವಾಗಿ ನಿರ್ನಾಮ ಆಗುತ್ತಿ ರುವ ಕೆರೆ ಕಟ್ಟೆಗಳು, ನೆಲಸಮವಾಗು ತ್ತಿರುವ ಗದ್ದೆಗಳು ಹೀಗೆ ಇನ್ನಿತರ ಎಲ್ಲಾ ಸಂಗತಿಗಳು ನದಿಯ ಪ್ರವಾಹ ಉಕ್ಕಿ ಹರಿಯಲು ಕಾರಣವಾಗುತ್ತಿದ್ದು, ಜನರ ಶಾಂತಿ- ನೆಮ್ಮದಿಯ ಜೀವನ ಬರಿದಾಗಲು ಕಾರಣವಾಗುತ್ತಿದೆ.
ಮರಳು ತೆಗೆದು ನದಿಯ ಒಡಲು ಆಳ ಮಾಡಿ: ನದಿಯ ದಂಡೆಯ ನಿವಾಸಿಗಳಲ್ಲಿ ಈಗ ಮತ್ತೊಂದು ಒಕ್ಕೊರಲ ಆಗ್ರಹ ಕೇಳಿ ಬರುತ್ತಿದೆ. ಅದುವೇ ನದಿಯ ಒಡಲಲ್ಲಿ ತುಂಬಿರುವ ಮರಳ ರಾಶಿ ತೆಗೆದು ಒಡಲನ್ನು ಆಳ ಮಾಡಿದರೆ ಪ್ರವಾಹ ಬರುವದಿಲ್ಲ ಎಂಬದಾಗಿದೆ.
ಆದರೆ, ನದಿಯಲ್ಲಿ ದಶಕಗಳ ಹಿಂದೆ ಸಂಗ್ರಹವಾಗುತ್ತಿದ್ದ ಮರಳ ರಾಶಿ ಇತ್ತೀಚಿನ ವರ್ಷಗಳಲ್ಲಿ ಕಾಣುತ್ತಿಲ್ಲ. ಏಕೆಂದರೆ ಮರಳುಗಳ್ಳರು ಹಗಲು ರಾತ್ರಿ ಎನ್ನದೇ ತಮ್ಮ ಕೆಲಸ ಮಾಡುತ್ತಲೇ ಇದ್ದು ಹೆಚ್ಚು ಮರಳು ಸಂಗ್ರಹವಾಗುತ್ತಿರುವ ಜಾಗವನ್ನು ಬಗೆದು ಅಗೆದು ನದಿಯೊಡಲನ್ನೇ ಘಾಸಿ ಗೊಳಿಸಿರುವ ವಾಸ್ತವತೆ ಜನರಿಗೆ ಅರಿವಾಗುತ್ತಿಲ್ಲ.
ನೆಲ್ಲಿಹುದಿಕೇರಿಯಿಂದ ಜಿಲ್ಲೆಯ ಗಡಿ ಶಿರಂಗಾಲದವರೆಗೂ ಕೆಲವು ರಾಜಕಾರಣಿಗಳು ಮತ್ತು ಕೆಲವು ಅಧಿಕಾರಿಗಳ ಕೃಪಾ ಪೋಷಿತ ಮರಳುಗಳ್ಳರು ರಾತ್ರಿಹಗಲೆನ್ನದೇ ಇಲ್ಲಿನ ನದಿಯೊಡಲನ್ನು ಬಗೆದು ಹಾಕಿದ್ದಾರೆ. ಅಷ್ಠೇ ಅಲ್ಲ ನದಿಯೊಳಗೆ ಅಲ್ಲಲ್ಲಿ ಬೆಳೆದು ನಿಂತಿದ್ದ ಸ್ವಾಭಾವಿಕ ವಾದ ಗಿಡ ಮರಗಳನ್ನು ಕಡಿದು ನದಿಯ ಜಾಗವನ್ನು ನೆಲಸಮ ಮಾಡಿದ್ದಾರೆ.
ಪೂಜ್ಯತಾ ಭಾವ ಬಾರದೇ ಪ್ರವಾಹ ನಿಲ್ಲದು : ಅಪಾರ ಪ್ರಾಣಿ ಪಕ್ಷಿಗಳ ಮತ್ತು ಜನಕೋಟಿಯ ದಾಹ ನೀಗಿಸಿ ಇಷ್ಟಾರ್ಥ ಸಿದ್ದಿಗೊಳಿಸುವ ನದಿಯನ್ನು ನಾವು ಅಂದರೆ ನದಿ ದಂಡೆಯ ವಾಸಿಗಳು ಹಾಗೂ ಸಾರ್ವಜನಿಕರು ಪೂಜ್ಯತಾ ಹಾಗೂ ಧನ್ಯತಾ ಭಾವದಿಂದ ನೋಡುವ ಮೂಲಕ ತ್ಯಾಜ್ಯಗಳನ್ನು ಬಿಸಾಕದೆ, ಕಸದ ತೊಟ್ಟಿಯಂತೆ ಕಾಣದೇ ಸದಾ ಗೌರವದಿಂದ ಸಂರಕ್ಷಣೆ ಮಾಡಿದಲ್ಲಿ ಅಪಾಯಗಳನ್ನು ತಡೆಯ ಬಹುದೇನೋ...!?
ಗಿಡಮರಗಳ ನೆಟ್ಟು ಬೆಳಸುವ ಯೋಜನೆ: ಸಮೀಕ್ಷೆಯೊಂದರ ಪ್ರಕಾರ ಕಾವೇರಿ ನದಿ ಕಳೆದ 70 ವರ್ಷಗಳಲ್ಲಿ ಶೇ.39 ಕ್ಷೀಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಅರ್ಧದಷ್ಟು ಭಾಗ ತೀವ್ರವಾದ ಅಂತರ್ಜಲ ಇಳಿಕೆಯಿಂದ ಬಳಲುತ್ತಿದೆ. ನದಿಯ ಜಲಾನಯನ ಪ್ರದೇಶದಲ್ಲಿ ಶೇ.87 ರಷ್ಟು ಮರಗಳು ಕಣ್ಮರೆಯಾಗಿದ್ದು ಮಳೆ ನೀರಿಗೆ ಮಣ್ಣಿನ ಸವಕಳಿ ಹಾಳಾಗಿದೆ. ಕೊಯ ಮತ್ತೂರು ಈಶಾ ಫೌಂಡೇಶನ್ನ ಸದ್ಗುರುಗಳು ಕಾವೇರಿ ನದಿಯ ಉಳಿವಿಗೆ ವಿಶೇಷವಾದ ಜನ ಹಾಗೂ ಜಲ ಜಾಗೃತಿ ಕೈಗೊಂಡಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಗಳಷ್ಟು ಮರಗಳನ್ನು ಬೆಳೆಸುವ ಬೃಹತ್ ಯೋಜನೆ ಹಮ್ಮಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ 73 ಕೋಟಿ ಗಳಷ್ಟು ಸಸಿಗಳನ್ನು ನೆಡುವ ಯೋಜನೆಯಿದೆ. ಇದಕ್ಕಾಗಿ ಸೆಪ್ಟೆಂಬರ್ ನಲ್ಲಿ ರಾಜ್ಯದಾದ್ಯಂತ ಬೃಹತ್ ಜಾಗೃತಿ ನಡೆಸುವ ಬಗ್ಗೆ ಸದ್ಗುರುಗಳು ಪ್ರಕಟಿಸಿದ್ದಾರೆ.
ವಿಶೇಷ ವರದಿ: ಕೆ.ಎಸ್. ಮೂರ್ತಿ