ಸಿದ್ದಾಪುರ, ಆ. 19: ಕರಡಿಗೋಡಿನ ಹೊಸಗದ್ದೆಯಲ್ಲಿ ಈ ಬಾರಿಯ ಮಹಾಮಳೆಯಿಂದಾಗಿ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾದ ಸಂತ್ರಸ್ತರು ಸಿದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದರು. ಈ ಕುಟುಂಬಗಳು ಮರಳಿ ತಮ್ಮ ಮನೆಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸರಕಾರದ ವತಿಯಿಂದ ನೀಡುವ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾಕುಮಾರಿ, ಜಿಲ್ಲಾ ಸ್ಕೌಟ್ ಗೈಡ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ, ಗ್ರಾ.ಪಂ. ಸದಸ್ಯೆ ಪ್ರೇಮಾ ಹಾಗೂ ಶಾಲಾ ಶಿಕ್ಷಕಿಯರು, ಕಂದಾಯ ಇಲಾಖೆಯ ಸಿಬ್ಬಂದಿ ಇನ್ನಿತರರು ಇದ್ದರು.
ನೆಲ್ಲಿಹುದಿಕೇರಿ: ಜಿಲ್ಲೆಯಲ್ಲಿ ಸುರಿದ ಮಹಾಮಳೆಯ ಪ್ರವಾಹದಿಂದ ಹಲವು ಗ್ರಾಮಗಳು ಜಲಾವೃತಗೊಂಡು ಮನೆ, ಆಸ್ತಿ, ಪಾಸ್ತಿ ಕಳೆದುಕೊಂಡು ಸಂಕಷ್ಟದಲ್ಲಿ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತ ಕುಟುಂಬಗಳಿಗೆ ಬೇಕಾದ ಅಗತ್ಯ ದಿನಬಳಕೆಯ ವಸ್ತುಗಳನ್ನು ನೀಡಲಾಗಿದ್ದು ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯು ಸಂತ್ರಸ್ತರ ಸೇವೆಗೆ ಸದಾ ಕೈ ಜೋಡಿಸಲಿದೆ ಎಂದು ಸಂಘಟನೆಯ ಸಂಚಾಲಕ ಸುಂಟಿಕೊಪ್ಪದ ಸಿ.ಎಂ ಹಮೀದ್ ಮೌಲವಿ ತಿಳಿಸಿದ್ದಾರೆ
ನೆಲ್ಲಿಹುದಿಕೇರಿ ಮುತ್ತಪ್ಪ ದೇವಸ್ಥಾನ ಸಭಾಂಗಣದಲ್ಲಿ ನೆಲಸಿರುವ ಸಂತ್ರಸ್ತರಿಗೆ ಬ್ಯಾಗುಗಳನ್ನು ವಿತರಣೆ ಮಾಡಿದ ನಂತರ ಮಾತನಾಡಿ, ಶಾಂತಿ-ಸಹಬಾಳ್ವೆ, ಸಹೋದರತ್ವ ಸಾರುವ ಸಂಘಟನೆಯು ಸಮಾಜದಲ್ಲಿ ಬದುಕುತ್ತಿರುವ ಎಲ್ಲ ವರ್ಗವನ್ನು ಸಮಾನವಾಗಿ ಕಾಣುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಸಮಾಜದ ಮುಖ್ಯವಾಹಿನಿಗೆ ತರಲು ಸಂಘಟನೆ ಮುಂದಾಗಿದೆ.
ಜಿಲ್ಲೆಯಲ್ಲಿ ಮಹಾಮಳೆ ಹಾಗೂ ಪ್ರಕೃತಿ ದುರಂತ ಸ್ಥಳಗಳಿಗೆ ತಂಡ ಭೇಟಿ ನೀಡಿ ಸಂಕಷ್ಟದಲ್ಲಿರುವವರ ಸಮಸ್ಯೆಗಳನ್ನು ಆಲಿಸಿ ಜನರಿಗೆ ಬೇಕಾದ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೀಡಲಾಗಿದ್ದು, ಸಂತ್ರಸ್ತರ ಬದುಕಿನ ಪುನರ್ ನಿರ್ಮಾಣಕ್ಕೆ ಸದಾ ಕೈಜೋಡಿಸುವದಾಗಿ ತಿಳಿಸಿದ ಅವರು, ಸಮಸ್ತ ಕೇರಳ ಜಮ್ಮಿಯತುಲ್ ಉಲಮ, ಎಸ್‍ವೈಎಸ್, ಸುಂಟಿಕೊಪ್ಪ ಖತೀಜಾಹುಮ್ಮಾ ಮದರಸಾ ಸಮಿತಿ ಹಾಗೂ ಎಸ್‍ಕೆಎಸ್‍ಎಸ್‍ಎಫ್ ಸಂಘಟನೆಯ ಮೂಲಕ ತುರ್ತು ಪರಿಹಾರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ನಾಯಿಬ್ ಖಾಜಿ ಎಂ.ಎಂ. ಅಬ್ದುಲ್ಲ ಫೈಝಿ,ಸುಂಟಿಕೊಪ್ಪ ಜಮಾ ಮಸೀದಿ ಅಧ್ಯಕ್ಷ ಹಸನ್ ಕುನ್ನಿ ಹಾಜಿ , ಎಸ್‍ವ್ಯೆ ಎಸ್ ಜಿಲ್ಲಾ ಕಾರ್ಯದರ್ಶಿ ಉಮ್ಮರ್ ಫೈಝಿ, ಎಸ್‍ಕೆಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಆರೀಫ್ ಫೈಝಿ, ಸದಸ್ಯ ಇಕ್ಬಾಲ್ ಮೌಲವಿ, ಪ್ರಮುಖರಾದ ಸಫ್ವಾನ್ ಮೊಹಮ್ಮದ್, ಅಬೂಬಕ್ಕರ್ ಸೇರಿದಂತೆ ಮತ್ತಿತರರು ಇದ್ದರು.
ಗೋಣಿಕೊಪ್ಪಲು: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಭಾಗದ ಸಂತ್ರಸ್ತರಿಗೆ ಸರಕಾರದ ವತಿಯಿಂದ ಸವಲತ್ತುಗಳ ಕಿಟ್ ವಿತರಿಸಲಾಯಿತು.
ಗೋಣಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ದಿನಗಳಿಂದ ಉಳಿದು ಕೊಂಡಿದ್ದ ಮಳೆ ಸಂತ್ರಸ್ತರಿಗೆ ಕಿಟ್ ವಿತರಿಸಿದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸಿ.ಕೆ. ಬೋಪಣ್ಣ ಸವಲತ್ತುಗಳನ್ನು ವಿತರಿಸಿದರು.
ಸಂತ್ರಸ್ತರು ಸರಕಾರ ನೀಡಿದ ಸವಲತ್ತುಗಳನ್ನು ಮಾರಾಟ ಮಾಡದೇ ಸ್ವಂತ ಬಳಕೆಗೆ ಬಳಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ನೋಡಲ್ ಅಧಿಕಾರಿ ಸೀತಾಲಕ್ಷ್ಮಿ, ರೆವಿನ್ಯೂ ಅಧಿಕಾರಿಗಳಾದ ಯಶವಂತ್, ಮಂಜುನಾಥ್, ರಘುನಾಥ್, ಸುನೀಲ್, ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ, ರಾಜಶೇಕರ್, ಜಪ್ಪು ಸುಬ್ಬಯ್ಯ ಮುಂತಾದವರು ಹಾಜರಿದ್ದರು.
ಕುಶಾಲನಗರ: ತುಮಕೂರು ಮಾಜಿ ಮೇಯರ್ ಗೀತಾ ರುದ್ರೇಶ್ ಮತ್ತು ತಂಡದ ಸದಸ್ಯರು ಕುಶಾಲನಗರದ ನೆರೆ ಸಂತ್ರಸ್ತರಿಗೆ ಗೃಹೋಪಯೋಗಿ ವಸ್ತುಗಳನ್ನು ವಿತರಣೆ ಮಾಡಿದರು.
ಕುಶಾಲನಗರದ ದಂಡಿನಪೇಟೆ, ಕೊಪ್ಪ ಮತ್ತಿತರ ವ್ಯಾಪ್ತಿಯಲ್ಲಿ ತೆರಳಿದ ತಂಡ ಹಲವು ಕುಟುಂಬಗಳಿಗೆ ಅವಶ್ಯಕತೆಯಿರುವ ಮನೆ ಉಪಯೋಗ ವಸ್ತುಗಳನ್ನು, ಬಟ್ಟೆ ಬರೆಗಳನ್ನು ನೀಡಿದರು.
ಈ ಸಂದರ್ಭ ತುಮಕೂರಿನ ಆನಂದ್, ಗುರುರಾಜ್, ಹೇಮಂತ್, ಲೋಕೇಶ್, ಸ್ಥಳೀಯ ಪ್ರಮುಖರಾದ ಕೆ.ಜಿ. ರವಿ, ಎಂ.ಎಸ್. ಸತೀಶ್ ಕುಮಾರ್, ಮಹದೇವ್, ವಿ.ಪಿ. ಚಂದ್ರಶೇಖರ್ ಮತ್ತಿತರರು ಇದ್ದರು.
ಹೆರೂರು ಶಾಲೆ
ಸುಂಟಿಕೊಪ್ಪ: ಇಲ್ಲಿನ ಕೆದಕಲ್ ಗ್ರಾಮ ಪಂಚಾಯಿತಿಯ ಹೆರೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನಿಂದ ಇಸ್ರೋ ವಿಜ್ಞಾನಿ ಡಾ. ಆರ್. ಇಂದು ಶೇಖರ್ ಉಚಿತವಾಗಿ ನೀಡಿದ್ದ ಕೊಡೆ ಬ್ಯಾಗ್‍ಗಳನ್ನು ಶಾಲೆಯ 20 ಮಕ್ಕಳಿಗೆ ಕಾಫಿ ಬೆಳೆಗಾರ ಸಿ.ಎ. ಕರುಂಬಯ್ಯ, ಶಿವು ಸೋಮಣ್ಣ ವಿತರಿಸಿದರು. ಈ ಸಂದರ್ಭ ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿಪ್ರಸಾದ್, ಕಾಯರ್‍ಮಾರ್, ಮಾಜಿ ಸದಸ್ಯ ರಮೇಶ್ ರೈ, ಶಾಲಾ ಶಿಕ್ಷಕಿ ನಾಗರತ್ನ, ಸೀಮ, ಪೋಷಕರು ಹಾಜರಿದ್ದರು.
ಬಿಜೆಪಿ ನೆರವು
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ತೆಪ್ಪದ ಕಂಡಿ ಬಳಿಯ ಸುಮಾರು 14 ಕುಟುಂಬದವರಿಗೆ ಮತ್ತು ಮಾದಾಪಟ್ಟಣದ 60 ಕುಟುಂಬದವರಿಗೆ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಅವರು ಟಾರ್ಪಲ್, ಪಾತ್ರೆಗಳ ಕಿಟ್ ನೀಡಿದರು. ಈ ಸಂದÀರ್ಭ ಗುಡ್ಡೆಹೊಸೂರಿನ ಬಿ.ಜೆ.ಪಿ. ಮುಖಂಡ ಎಂ.ಆರ್. ಉತ್ತಪ್ಪ ಹಾಜರಿದ್ದರು.
ಕಾಂಗ್ರೆಸ್ ನೆರವು
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ತೆಪ್ಪದಕಂಡಿ ಬಳಿಯ ನಿರಾಶ್ರಿತರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಹಾರ ಕಿಟ್ ಮತ್ತು ಕಂಬಳಿಯನ್ನು ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಭಿಮಯ್ಯ ಮತ್ತು ಕಾವೇರಪ್ಪ ಹಾಜರಿದ್ದರು.
ಮರಾಠ ಸಂಘ
ಮಡಿಕೇರಿ: ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘ ಹಾಗೂ ಜಿಲ್ಲಾ ಅಂಬಾಭವಾನಿ, ಯುವಕ-ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಪದಾಧಿಕಾರಿಗಳು ಕಾವೇರಿ ಪ್ರವಾಹದ ಹಾನೀಗೀಡಾದ ಪ್ರದೇಶಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಜಿಲ್ಲೆಯಲ್ಲಿ ಸಾಕಷ್ಟು ಮನೆಗಳು, ಆಸ್ತಿ-ಪಾಸ್ತಿಗಳು ಹಾನಿಯಾಗಿತ್ತು. ಈ ಸಂದರ್ಭ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ಉದಯ, ವೆಂಕಟೇಶ್, ಮುರಳಿಧರ್, ಮೋಹನ್, ಶಿವಪ್ಪ ಅವರುಗಳ ಮನೆಗಳು ಸಂಪೂರ್ಣ ಹಾನಿಯಾಗಿತ್ತು. ಅಲ್ಲದೆ ವಾಲ್ನೂರು, ಕರಡಿಗೋಡು, ನೆಲ್ಲಿಹುದಿಕೇರಿಗೆ ಭೇಟಿ ನೀಡಿದ ಪದಾಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಈ ಸಂದರ್ಭ ಎಂ.ಎಂ. ಪರಮೇಶ್ವರ್, ಸಂಪತ್‍ಕುಮಾರ್, ಎಂ.ಎಸ್. ಯೋಗೇಂದ್ರ, ಎಂ.ಟಿ. ದೇವಪ್ಪ, ಎಂ.ಟಿ. ಗುರುವಪ್ಪ, ರಾಮಣ್ಣ ಇದ್ದರು.
ಸ್ನೇಹಿತರ ಒಕ್ಕೂಟ
ಚೆಟ್ಟಳ್ಳಿ: ಕುಶಾಲನಗರದ ಸ್ನೇಹಿತರ ಒಕ್ಕೂಟದಿಂದ ಕೊಂಡಂಗೇರಿ, ನಾಪೋಕ್ಲು ವ್ಯಾಪ್ತಿಯ ನೆರೆಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಯಿತು.
ಇಬ್ರಾಹೀಂ, ಸ್ನೇಹಿತರು ಒಗ್ಗೂಡಿ ನೆರೆಸಂತ್ರಸ್ತರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿದ್ದು, ಕೊಂಡಂಗೇರಿ, ನಾಪೋಕ್ಲು ಭಾಗದ ಸಂತ್ರಸ್ತರಿಗೆ ನೀಡಿದರು.
ದಾನಿಗಳಾದ ಬೆಂಗಳೂರಿನ ಶೆಫಿ ಹಾಗೂ ಅಕ್ಬರ್ ಆಹಾರ ಸಾಮಗ್ರಿಗಳನ್ನು ನೀಡಿದ್ದು, ಸಂತ್ರಸ್ತರಿಗೆ ವಿತರಿಸುವ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಅಕ್ಬರ್ ತಿಳಿಸಿದರು.
ಈ ಸಂದರ್ಭ ಕುಶಾಲನಗರದ ನಿವಾಸಿಗಳಾದ ಮುನೀರ್, ಶರೀಫ್, ಆರಿಫ್, ಮಡಿಕೇರಿಯ ಫಿರ್ದೌಸ್, ಪಿರಿಯಾಪಟ್ಟಣದ ಹಂಸ ಇದ್ದರು.