ಮಡಿಕೇರಿ, ಆ. 18: ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್ ಎಂಬವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ; ರೋಗಿಗಳ ನಿರ್ಲಕ್ಷ್ಯದೊಂದಿಗೆ ಅಮಾಯಕ ಮಗುವಿನ ಸಾವಿಗೆ ಕಾರಣರಾಗಿದ್ದು; ಇವರ ವಿರುದ್ಧ ಸರಕಾರ ಕ್ರಮ ಜರುಗಿಸಬೇಕೆಂದು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಮತ್ತು ಗೋಣಿಕೊಪ್ಪಲು ನಾಗರಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು; ವೈದ್ಯರು ಜವಾಬ್ದಾರಿ ಮರೆತು ವರ್ತಿಸುತ್ತಾ; ಇಬ್ಬರು ಬಾಲಕಿಯರ ಸಾವಿನ ವೇಳೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಸಂಪರ್ಕಕ್ಕೂ ಲಭಿಸದೆ; ದುರ್ದೈವಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸದೆ ಅಸಡ್ಡೆ ತೋರಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ವೈದ್ಯರನ್ನು ಅಮಾನತುಗೊಳಿಸಿ; ಕರ್ತವ್ಯಕ್ಕೆ ಹಾಜರಾಗದಿರುವ ಕುರಿತು ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.