ಸಿದ್ದಾಪುರ, ಆ. 18: ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಮೌಲ್ಯದ ಕಾಫಿ ಹಾಗೂ ಯಂತ್ರಗಳು ನಾಶಗೊಂಡು ನಷ್ಟ ಸಂಭವಿಸಿರುವ ಘಟನೆ ಹಾಲುಗುಂದ ಗ್ರಾಮ ಪಂಚಾಯಿತಿಯ ಕೊಂಡಂಗೇರಿಯಲ್ಲಿ ನಡೆದಿದೆ. ಈ ಬಾರಿಯ ಮಹಾಮಳೆಯ ಪ್ರವಾಹದಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟ ಮೀರಿ ಹರಿದ ಪ್ರವಾಹದಿಂದ ಕೊಂಡಂಗೇರಿ ಗ್ರಾಮವು ತತ್ತರಿಸಿ ಹೋಗಿತ್ತು. ಕೊಂಡಂಗೇರಿ ಯಲ್ಲಿ ಕಳೆದ ಸುಮಾರು ವರ್ಷಗಳಿಂದ ಕಾಫಿ ಮಿಲ್ಸ್ ಘಟಕವನ್ನು ನಡೆಸುತ್ತಿರುವ ಆಲವಿ ಎಂಬವರಿಗೆ ಸೇರಿದ ಕಾಫಿ ಘಟಕಕ್ಕೆ ಕಾವೇರಿ ನದಿ ಪ್ರವಾಹದಿಂದ ರಾತ್ರಿ ಸಮಯದಲ್ಲಿ ಏಕಾಏಕಿ ನೀರು ನುಗ್ಗಿದ ಪರಿಣಾಮ ಘಟಕದೊಳಗೆ ಇದ್ದ 800ಕ್ಕೂ ಅಧಿಕ ರೋಬೆಸ್ಟ ಕಾಫಿ ಚೀಲಗಳು ಸಂಪೂರ್ಣ ಮುಳುಗಡೆಗೊಂಡು ಹಾನಿಯಾಗಿರುತ್ತದೆ. ಒಣಗಿದ ಕಾಫಿ ಮೊಳಕೆ ಒಡೆಯುತ್ತಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಇದಲ್ಲದೆ ಕಾಫಿ ಘಟಕಕ್ಕೆ ಕಾಫಿ ಬೆಳೆಗಾರರು ದರ ಬರುವ ಸಂದರ್ಭದಲ್ಲಿ ಲೆಕ್ಕಾಚಾರ ಮಾಡಿ ಬೆಲೆ ನಿಗದಿಪಡಿಸಿ ಹಣ ಪಡೆಯಲು ಇಟ್ಟಿದ್ದ ಕಾಫಿಗಳು ಕೂಡ ನೀರು ಪಾಲಾಗಿದೆ. ಘಟಕದಲ್ಲಿ ಕಾಫಿ ಬೇಳೆ ತಯಾರಿಸುವ ಯಂತ್ರಗಳು ಮುಳುಗಡೆಗೊಂಡು ಹಾನಿಯಾಗಿ ನಷ್ಟವಾಗಿರುತ್ತದೆ. ಜನರೇಟರ್ ಕೂಡ ಹಾನಿಯಾಗಿ ನಷ್ಟವಾಗಿರುತ್ತದೆ ಎಂದು ಘಟಕದ ಮಾಲೀಕ ಆಲವಿ ತಿಳಿಸಿದ್ದಾರೆ. ಇಷ್ಟೊಂದು ಪ್ರಮಾಣದ ನಷ್ಟ ಸಂಭವಿಸಿರುವದರಿಂದ ಆಲವಿಯವರಿಗೆ ದಿಕ್ಕು ತೋಚದಂತಾಗಿದೆ. ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಕಾಫಿ ತೋಟಗಳ ನಾಶ : ಮಹಾಮಳೆಗೆ ತತ್ತರಿಸಿರುವ ಕೊಂಡಂಗೇರಿ ಸಮೀಪದ ಹಾಲಗುಂದ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಹಾನಿಯಾಗಿವೆ. ಅಲ್ಲದೆ ನದಿ ನೀರು ಕಾಫಿ ತೋಟಗಳಿಗೆ ನುಗ್ಗಿದ ಪರಿಣಾಮ ಮುಳುಗಡೆ ಗೊಂಡಿರುವ ಕಾಫಿ ತೋಟದ ಫಸಲುಗಳು, ಗಿಡಗಳು ಸಂಪೂರ್ಣ ಒಣಗಿರುತ್ತದೆ. ಕೃಷಿ ಮಾಡಿದ ಭತ್ತದ ಗದ್ದೆಯ ಕೃಷಿ ನಾಶಗೊಂಡು ಅಪಾರ ನಷ್ಟ ಸಂಭವಿಸಿದೆ. -ಚಿತ್ರ , ವರದಿ: ವಾಸು