ಚೆಟ್ಟಳ್ಳಿ,ಆ. 18: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ವರ್ತಕರು ಕಾವೇರಿ ನಿಸರ್ಗಧಾಮವನ್ನು ಸ್ವಚ್ಛಗೊಳಿಸುವ ಮೂಲಕ ಸೇವೆ ಸಲ್ಲಿಸಿದ್ದಾರೆ. ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ 200ಕ್ಕೂ ಹೆಚ್ಚು ವರ್ತಕರು ಹಾಗೂ ಕಾರ್ಮಿಕರು ಕಾವೇರಿ ನಿಸರ್ಗಧಾಮದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭ ಮಾತನಾಡಿದ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಸ್ವ ಇಚ್ಛೆಯಿಂದ ಕಾವೇರಿ ನಿಸರ್ಗಧಾಮವನ್ನು ಸ್ವಚ್ಛಗೊಳಿಸಲು ಮುಂದಾಗಿರುವದು ಒಳ್ಳೆಯ ಕಾರ್ಯವೆಂದರು.

ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ವರ್ತಕ ಮುರಳಿ ಅಂಚೆಮನೆ ಮಾತನಾಡಿ, ಪ್ರವಾಸಿ ತಾಣಗಳು ಸ್ವಚ್ಛತೆಯಿಂದ ಕೂಡಿರಬೇಕು. ಆಗ ಮಾತ್ರ ಪ್ರವಾಸಿಗರು ಇತ್ತ ಧಾವಿಸಲು ಉತ್ಸಾಹ ತೋರುತ್ತಾರೆ. ಈ ಹಿನ್ನೆಲೆಯಲ್ಲಿ ಎನ್.ಟಿ.ಸಿ ಯ ತಂಡ ಸ್ವಯಂ ಪ್ರೇರಿತವಾಗಿ ಕಾವೇರಿ ನಿಸರ್ಗಧಾಮವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಎನ್.ಟಿ.ಸಿ ವರ್ತಕರು ಹಾಗೂ ಸಿಬ್ಬಂದಿಗಳು ತಂಡಗಳಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದೇವೆ ಎಂದರು.

ಮಹಾಮಳೆಗೆ ಕಾವೇರಿ ನಿಸರ್ಗಧಾಮ ಸೇರಿದಂತೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ 80ಕ್ಕೂ ಹೆಚ್ಚು ಮಳಿಗೆಗಳು ನೀರಿನಿಂದಾವೃತಗೊಂಡು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದರೂ ಕೂಡಾ ಸ್ವಯಂ ಪ್ರೇರಿತವಾಗಿ ಕಾವೇರಿ ನಿಸರ್ಗಧಾಮವನ್ನು ಸ್ವಚ್ಛಗೊಳಿಸಲು ಮುಂದಾಗಿರುವದು ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.