*ಸಿದ್ದಾಪರ, ಆ. 18: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಳೆದೆರಡು ದಿನಗಳಿಂದ ಇಳಿಮುಖ ಕಂಡಿದೆ. ನದಿ ನೀರಿನ ಮಟ್ಟ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದೆ. ಭಾರೀ ಮಳೆಯಿಂದ ಮನೆ, ಮಠ ಕಳೆದುಕೊಂಡ ಗ್ರಾಮಸ್ಥರು ಇದೀಗ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಬಹುತೇಕ ಮಕ್ಕಳ ಶಾಲಾ ದಾಖಲಾತಿಗಳು, ಪಠ್ಯ ಪುಸ್ತಕಗಳು, ಬೋಧನಾ ಸಾಮಗ್ರಿಗಳು, ಶಾಲಾ ಸಮವಸ್ತ್ರಗಳು ನೀರು ಪಾಲಾಗಿದ್ದು, ಮಕ್ಕಳ ಭವಿಷ್ಯ ಕೂಡ ನೀರು ಪಾಲಾಗಿದೆ. ಹೆಚ್ಚಿನ ಪೋಷಕರ ಅಮೂಲ್ಯ ದಾಖಲಾತಿಗಳು ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಕಾವೇರಿ ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಿದ್ದ ನಿವಾಸಿಗಳು ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ಮನೆಯತ್ತ ಮುಖ ಮಾಡಿದಾಗ ತಾವಿದ್ದ ಪ್ರದೇಶದ ಭೌಗೋಳಿಕ ಚಿತ್ರಣವೇ ಬದಲಾಗಿದೆ. ಈ ಹಿಂದೆ ನಿವೇಶನ ಇತ್ತು ಎಂಬ ಕುರುಹು ಇಲ್ಲದಂತೆ ಪ್ರವಾಹ ತೊಳೆದು ಹಾಕಿದೆ.
ಅನೇಕ ಕಾರ್ಮಿಕರು ವರ್ಷವಿಡಿ ದುಡಿದು ಕೂಡಿಟ್ಟ ವಸ್ತುಗಳು, ಕನಸುಗಳೂ ಕೂಡ ನುಚ್ಚುಚೂರಾಗಿವೆ. ಮಕ್ಕಳ ಮದುವೆಗೆ, ಭವಿಷ್ಯದಲ್ಲಿ ತಲೆದೋರುವ ಸಂಕಷ್ಟಕ್ಕೆ ಕೂಡಿಟ್ಟ ಧನ, ಧಾನ್ಯ ಒಡವೆಗಳು ಇದೀಗ ನೆನಪು ಮಾತ್ರ.
ಅನೇಕ ಮಹಿಳೆಯರು ವಿವಿಧ ಸ್ವ ಸಹಾಯ ಸಂಘ, ಸಂಸ್ಥೆಗಳಿಂದ ಸಾಲ ಮಾಡಿ ಗಳಿಸಿದ್ದ ಪರಿಕರಗಳು ನಾಶವಾಗಿದ್ದು ಇದೀಗ ಸಾಲ ಮಾತ್ರ ಉಳಿದಿದೆ. ಅಶ್ಲೇಷ ಮಳೆಯ ಪ್ರಭಾವ ಜಿಲ್ಲೆಯ ಬೆಳೆಗಾರರು, ಕಾರ್ಮಿಕರು ಎನ್ನದೇ ಪ್ರತಿಯೊಬ್ಬರನ್ನೂ ಬಾಧಿಸಿದ್ದು ಮನೆ ಕಳೆದುಕೊಂಡ ಕಾರ್ಮಿಕರು ಇದೀಗ ತೋಟ ಗದ್ದೆಗಳಲ್ಲಿ ಕೆಲಸವಿಲ್ಲದೇ ಇತ್ತ ಮಕ್ಕಳ ಭವಿಷ್ಯವನ್ನು ಕೈಯಲ್ಲಿ ಹಿಡಿದು ಮುಂದಿನ ದಿನಗಳನ್ನು ಕಾಯುತ್ತಿದ್ದಾರೆ.
- ಅಂಚೆಮನೆ ಸುಧಿ