ಸಿದ್ದಾಪುರ, ಆ. 17: ಕೇಂದ್ರ ಸರಕಾರವು ಕರ್ನಾಟಕ ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಬೇಕು; ಕೂಡಲೇ ರಾಜ್ಯಕ್ಕೆ ರೂ. 10 ಸಾವಿರ ಕೋಟಿ ಪರಿಹಾರ ಬಿಡುಗಡೆಗೊಳಿಸಬೇಕೆಂದು ಮಾಜಿ ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ನಿಯೋಗದ ಅಧ್ಯಕ್ಷರಾದ ಡಾ. ಹೆಚ್.ಸಿ. ಮಹದೇವಪ್ಪ ಒತ್ತಾಯಿಸಿದರು.ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ, ಸಿದ್ದಾಪುರಕ್ಕೆ ಭೇಟಿ ನೀಡಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಸಂತ್ರಸ್ತರ ಬಳಿ ಮಾಹಿತಿ ಪಡೆದುಕೊಂಡ ನಂತರ ನೆಲ್ಯಹುದಿಕೇರಿಯ ಕುಂಬಾರಗುಂಡಿಯಲ್ಲಿ ಹಾನಿಗೊಳಗಾದ ಹಾಗೂ ಕುಸಿದು ಬಿದ್ದಿರುವ ಮನೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿಯ ಮಹಾಮಳೆಯಿಂದಾಗಿ ಕರ್ನಾಟಕ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮನೆಗಳು ಕುಸಿದಿರುತ್ತದೆ. ಅಲ್ಲದೆ 60 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಜೀವಹಾನಿ, ಜಾನುವಾರುಗಳು ಕೂಡ ನೂರಾರು ಸಾವನ್ನಪ್ಪಿವೆ. ರಾಜ್ಯಕ್ಕೆ ಅಪಾರ ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯವನ್ನು ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಿ ರೂ. 10 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಪಡಿಸಿದರು.ಈ ಬಾರಿಯ ಪ್ರವಾಹಕ್ಕೆ ಸಿಲುಕಿಕೊಂಡು ಮನೆ-ಮಠಗಳನ್ನು ಕಳೆದುಕೊಂಡವರಿಗೆ ಶಾಶ್ವತ ಸೂರು ಒದಗಿಸಿಕೊಡಲು ರಾಜ್ಯ ಸರಕಾರವನ್ನು ಹಾಗೂ ಕೇಂದ್ರ ಸರಕಾರವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ ಎಂದರು. ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸಿನ ಸಚಿವೆ ನಿರ್ಮಲಾ ಸೀತರಾಮನ್ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅವರಿಗೆ ಸಮಸ್ಯೆ ತಿಳಿದಿರುತ್ತದೆ. ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಪ್ರವಾಹವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾಗಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಸ್ಪಂದಿಸಬೇಕು. ಅವರಿಗೆ ಶಾಶ್ವತ ಸೂರು ಒದಗಿಸಲು ಶ್ರಮವಹಿಸಬೇಕೆಂದರು.
(ಮೊದಲ ಪುಟದಿಂದ) ನದಿ ದಡದಲ್ಲಿ ದುರ್ಬಲ ವರ್ಗದವರು ವಾಸ ಮಾಡಿಕೊಂಡಿದ್ದು, ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸಮಿತಿಯು ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸಂತ್ರಸ್ತರ ಸಮಸ್ಯೆಗಳನ್ನು ಕೆಪಿಸಿಸಿ ಆಲಿಸಿ ಅವರ ಬೇಡಿಕೆಗಳ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವದೆಂದರು.
ರಾಜ್ಯ ಸರಕಾರವು ಸಂತ್ರಸ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಾಗಿದೆಯೆ ಎಂದು ತಿಳಿಯಲಾಗುವದೆಂದರು. ಈ ಬಾರಿಯ ಪ್ರವಾಹದಿಂದಾಗಿ ರಾಜ್ಯದಲ್ಲಿ ಸಾವಿರಾರು ಎಕರೆ ಕೃಷಿ ಫಸಲು ನಾಶ ವಾಗಿದ್ದು, ವಾಣಿಜ್ಯ ವ್ಯವಹಾರಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ಜನಸಾಮಾನ್ಯರ ಜೀವನ ದುಸ್ತರವಾಗಿದೆಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಾ. ಯತೀಂದ್ರ, ಮಾಜಿ ಸಂತ್ರಸ್ತರಾದ ವಿಜಯಶಂಕರ್, ಧ್ರುವನಾರಾಯಣ, ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಟಿ.ಪಿ. ರಮೇಶ್, ಕಾಂಗ್ರೆಸ್ ಮುಖಂಡರಾದ ವಿ.ಪಿ. ಶಶಿಧರ್, ಕೆ.ಪಿ. ಚಂದ್ರಕಲಾ, ಸುನೀತಾ ಮಂಜುನಾಥ್ ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳು, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.
ಕುಶಾಲನಗರ : ಕಾಂಗ್ರೆಸ್‍ನ ರಾಜ್ಯ ಘಟಕದ ಪ್ರಮುಖರು ಕುಶಾಲನಗರಕ್ಕೆ ಭೇಟಿ ನೀಡಿ ವಿವಿಧ ಬಡಾವಣೆಗಳಲ್ಲಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಮಾಜಿ ಸಚಿವರುಗಳಾದ ಎಚ್.ಸಿ. ಮಹದೇವಪ್ಪ, ಸಿ.ಎಚ್. ವಿಜಯಶಂಕರ್, ಶಾಸಕರುಗಳಾದ ಯತೀಂದ್ರ, ಎಂಎಲ್ಸಿ ವೀಣಾ ಅಚ್ಚಯ್ಯ ಮತ್ತಿತರರ ತಂಡ ಕುಶಾಲನಗರದ ದಂಡಿನಪೇಟೆ, ವಿವೇಕಾನಂದ ಬಡಾವಣೆಗೆ ತೆರಳಿ ಕಾವೇರಿ ನದಿ ನೀರಿನಿಂದ ಜಲಾವೃತಗೊಂಡು ಕುಸಿದ ಮನೆಗಳ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.
ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್, ನದಿ ತಟದಲ್ಲಿರುವ ಜನರಿಗೆ ಪರಿಹಾರ ನೀಡುವದ ರೊಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಸಮರ್ಪಕವಾಗಿ ಪರಿಹಾರ ಸಂತ್ರಸ್ತರಿಗೆ ತಲಪುವಂತೆ ಸ್ಥಳೀಯ ಆಡಳಿತ ನಿಗಾವಹಿಸಬೇಕು ಎಂದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕುಡಾ ಮಾಜಿ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಮಂಜುನಾಥ್ ಗುಂಡೂರಾವ್, ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪ.ಪಂ. ಸದಸ್ಯರಾದ ಖಲೀಮುಲ್ಲಾ, ಪ್ರಮೋದ್ ಮುತ್ತಪ್ಪ ಮತ್ತಿತರರು ಇದ್ದರು. -ವಾಸು, ಸಿದ್ದಾಪುರ, ಸಿಂಚು