ಕೂಡಿಗೆ, ಆ. 17: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಹಿಂಬದಿಯ ಹೂಳೆತ್ತಲು ಸರ್ಕಾರಕ್ಕೆ ಕಳೆದ ಸಾಲಿನಲ್ಲಿ ಸವಿಸ್ತಾರವಾಗಿ ಸಮೀಕ್ಷೆ ಮಾಡಿ ಪ್ರಸ್ತಾವನೆ ಕಳುಹಿಸಲಾಗಿತ್ತು. ಪ್ರಸ್ತಾವನೆಗೆ ಮಂಜೂರಾತಿ ದೊರೆತು ಈಗಾಗಲೇ ರೂ. 130 ಕೋಟಿ ಬಿಡುಗಡೆಗೊಂಡಿದ್ದು, ಮುಂದಿನ 2020ರ ಜನವರಿಯಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕಳೆದ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚು ಪ್ರಮಾಣದಲ್ಲಿ ನೀರು ಬಂದ ಪರಿಣಾಮ ಹೆಚ್ಚಾಗಿ ಮಣ್ಣು ಕೊಚ್ಚಿಕೊಂಡು ಬಂದಿದ್ದು, ಅತಿಯಾಗಿ ಹೂಳು ತುಂಬಿದೆ. ಅಲ್ಲದೆ, ಹಾರಂಗಿ ಅಚ್ಚಕಟ್ಟು ವ್ಯಾಪ್ತಿಯ ಹಾರಂಗಿ ಹಿನ್ನೀರು, ಮಾದಾಪುರ, ಹಟ್ಟಿಹೊಳೆ, ಮಾದಾಪುರದ ಕಿರುಹೊಳೆ, ಸೂರ್ಲಬ್ಬಿ, ಗರ್ವಾಲೆ ಕಡೆಯಿಂದ ಹೆಚ್ಚು ಬೆಟ್ಟ ಕುಸಿತದ ಪರಿಣಾಮ ಹಾರಂಗಿ (ಮೊದಲ ಪುಟದಿಂದ) ಅಣೆಕಟ್ಟೆಯ ನೀರು ಸಂಗ್ರಹದ ಕೇಂದ್ರದಿಂದ 3 ಕಿ.ಮೀ ದೂರವರೆಗೂ ಹೂಳು ತುಂಬಿದೆ. ಇದರಿಂದ ನೀರು ಹೆಚ್ಚು ಸಂಗ್ರಹವಾಗದೇ, 8 ಟಿಎಂಸಿ ನೀರು ಸಾಮಥ್ರ್ಯವಿರುವ ಅಣೆಕಟ್ಟೆಯಲ್ಲಿ ಕೇವಲ 6 ಟಿಎಂಸಿ ನೀರಿನ ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಮಳೆ ಬಿದ್ದರೂ ಬೇಗ ಅಣೆಕಟ್ಟೆಯು ತುಂಬುವಂತಾಗಿದೆ. ಅಲ್ಲದೆ, ಅಣೆಕಟ್ಟೆ ತುಂಬಿದ ತಕ್ಷಣ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅದರಿಂದ ಕೆಳಗಿನ ಪ್ರದೇಶಗಳು ಜಲಾವೃತಗೊಂಡು ಕಳೆದ ಸಾಲಿನಲ್ಲಿ ಮತ್ತು ಈ ಸಾಲಿನಲ್ಲಿಯೂ ಅನೇಕ ನಷ್ಟಗಳು ಉಂಟಾಗಿವೆ.

ಸ್ಥಳವನ್ನು ವೀಕ್ಷಿಸಿದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸದನದಲ್ಲಿಯೂ ಚರ್ಚೆ ಮಾಡಿ, ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ವಿಚಾರಕ್ಕೆ ತಜ್ಞರ ತಂಡವನ್ನು ಹಾರಂಗಿಗೆ ಕಳುಹಿಸಿ ಅಧಿಕಾರಿ ವರ್ಗದವರ ಮಾಹಿತಿ ಮತ್ತು ಅದಕ್ಕೆ ಬೇಕಾಗುವ ಹಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅದರಂತೆ ಇದೀಗ ಸರ್ಕಾರದಿಂದ ಹಣ ಮಂಜೂರಾಗಿ ಹಣಕಾಸು ಇಲಾಖೆಯ ಮುಖೇನ ಕಾವೇರಿ ನೀರಾವರಿ ನಿಗಮದ ಮುಖಾಂತರ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ.

ಹಾರಂಗಿ ಅಣೆಕಟ್ಟೆಯು ಪ್ರಾರಂಭವಾದಾಗಿನಿಂದ ಇಂದಿನ ವರೆಗೆ 51 ವರ್ಷದ ನಂತರ ಪ್ರಥಮವಾಗಿ 2020ಕ್ಕೆ ಹಾರಂಗಿ ಜಲಾಶಯದ ಹೂಳೆತ್ತುವ ಕಾರ್ಯ ಪ್ರಾರಂಭಗೊಳ್ಳಲಿದೆ.

ಹಾರಂಗಿ ಅಣೆಕಟ್ಟೆಯ ಹೂಳೆತ್ತುವ ಪ್ರಸ್ತಾವನೆಯು ಸರ್ಕಾರದ ಯೋಜನೆಯ ಪ್ರಮುಖ ವಿಷಯವಾಗಿರುತ್ತದೆ. ಕಾವೇರಿ ನೀರಿನ ವಿಚಾರ ಬಂದಾಗ ಹಾರಂಗಿ ಅಣೆಕಟ್ಟೆಯಲ್ಲಿ ಸಂಗ್ರಹವಾದ ನೀರನ್ನು ಹರಿಸಲಾಗುತ್ತಿದೆ. ನೀರು ಸಂಗ್ರಹವಾದಲ್ಲಿ ಕಾವೇರಿ ನದಿಗೆ ಹರಿಸುವದರ ಮೂಲಕ ಕೆಆರ್‍ಎಸ್ ಭಾಗಕ್ಕೆ ಎಲ್ಲಾ ರೀತಿಯಲ್ಲಿ ಅನುಕೂಲವಾಗುತ್ತಿದೆ. 1968ರಲ್ಲಿ ಅಣೆಕಟ್ಟೆಯ ಕಾಮಗಾರಿ ಪೂರ್ಣಗೊಂಡು ಇದರಿಂದ ಇದರ ಸಾಮಥ್ರ್ಯ ಮತ್ತು ಅದರ ಅನುಗುಣವಾಗಿ ನೀರನ್ನು ಸಂಗ್ರಹಿಸಿ, ನಿಯಮಾನುಸಾರ ನದಿಗೆ ಹರಿಬಿಡಲಾಗುತ್ತಿತ್ತು. 1978ರಲ್ಲಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳನ್ನು ಗುರುತಿಸಿ, ಹಾರಂಗಿ ಮುಖ್ಯ ನಾಲೆಯ ಮುಖೇನ ನೀರನ್ನು ಹರಿಸುವ ಉದ್ದೇಶ ಹೊಂದಲಾಯಿತು. ಹಾರಂಗಿಯಿಂದ ಕಣಿವೆಯವರೆಗೆ ಮುಖ್ಯನಾಲೆ, ಕಣಿವೆಯಿಂದ ಎಡದಂಡೆ ಮತ್ತು ಬಲದಂಡೆ ನಾಲೆಯಾಗಿ ವಿಂಗಡಿಸಿ ಎಡದಂಡೆ ನಾಲೆಯಲ್ಲಿ ಜಿಲ್ಲೆಯ ಗಡಿಭಾಗ ಶಿರಂಗಾಲ, ಹಾಸನ ಜಿಲ್ಲೆಯ ಅರಕಲಗೂಡು ಮತ್ತು ಸಾಲಿಗ್ರಾಮ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಭೂಮಿಗೆ ನೀರೊದಗಿಸುವ ಯೋಜನೆ ಪ್ರಾರಂಭಗೊಂಡಿತು. ಅದರಂತೆ ಬಲದಂಡೆ ನಾಲೆಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ ಅರ್ಧ ಭಾಗಕ್ಕೆ ಈ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಯಲ್ಲಿ ಹಾರಂಗಿಯ ಮುಖ್ಯ ನಾಲೆಯ ನೀರು, ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಕೆರೆಯಾದ ಕರಡಿಲಕ್ಕನಕೆರೆಯ ಮೂಲಕ ನೀರನ್ನು ಹರಿಸಿ, ಕೆರೆಯಿಂದ ಲಕ್ಷಾಂತರ ರೂ. ವೆಚ್ಚ ಮಾಡಿ, ಏತ ನೀರಾವರಿಯನ್ನು ಅಳವಡಿಸಿ ಆ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆಯಿಂದ ನೀರನ್ನು ಒದಗಿಸಲು ಕಾಮಗಾರಿ ಮಾಡಲಾಗಿತ್ತು. ಅದರಂತೆ 1982-83ನೇ ಸಾಲಿನಿಂದ ನೀರಾವರಿ ಇಲಾಖೆಯ ಮುಖೇನ ರೈತರಿಗೆ ಅನುಕೂಲವಾಗುವಂತೆ ಮತ್ತು ಬಯಲು ಸೀಮೆಯ ಪ್ರದೇಶಕ್ಕೆ ಭತ್ತದ ಬೇಸಾಯ ಮಾಡಲು ನೀರನ್ನು ಹರಿಸಲಾಗುತ್ತ್ತಿದೆ.

-ಕೆ.ಕೆ. ನಾಗರಾಜ ಶೆಟ್ಟಿ