ಮಡಿಕೇರಿ, ಆ. 17: ವಿದೇಶಗಳಲ್ಲಿ ಭಾರತೀಯರಿಗೆ ಉದ್ಯೋಗ ಕಲ್ಪಿಸುವದಾಗಿ; ಹಣ ಪಡೆದು ವಂಚಿಸುತ್ತಿರುವ ಜಾಲವೊಂದರಲ್ಲಿ ಸಿಲುಕಿರುವ ಕೊಡಗಿನ ಯುವಕನೊಬ್ಬನ ಸಹಿತ; ಇತರ ನಾಲ್ವರು ರಷ್ಯಾದಲ್ಲಿ ಸಂಕಷ್ಟದಲ್ಲಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಇಂತಹ ಮೋಸದ ಜಾಲಕ್ಕೆ ಸಿಲುಕಿರುವ ಮಡಿಕೇರಿಯ ಯುವಕ ಎನ್.ವಿ. ವಿನಯ್ ಹಾಗೂ ತಮಿಳುನಾಡು ಮೂಲದ ನಾಲ್ವರು ಭಾರತೀಯ ಯುವಕರು ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್‍ನಲ್ಲಿ ಸಿಲುಕಿ ಕೊಂಡಿದ್ದಾರೆ.ಈ ಪ್ರಕರಣದಲ್ಲಿ ಚೆನ್ನೈನ ಸದ್ದಾಂ ಹುಸೇನ್ ಎಂಬ ವ್ಯಕ್ತಿ ಅಂತರ್ಜಾಲ ದಲ್ಲಿ ಉದ್ಯೋಗ ಕಲ್ಪಿಸುವ ಆಮಿಷವೊಡ್ಡಿದ್ದು; ಸಂಬಂಧಿಸಿದ ವಂಚಕನನ್ನು ಸಂಚಪರ್ಕಿಸಿರುವ ವಿನಯ್ ಮಡಿಕೇರಿಯಿಂದ ಚೆನ್ನೈಗೆ ಪ್ರಯಾಣಿಸಿದ್ದಾರೆ. ಅಲ್ಲಿ ಸಂಬಂಧಿಸಿದ ವ್ಯಕ್ತಿಗೆ ಹಣ ನೀಡಿ ರಷ್ಯಾಕ್ಕೆ ತೆರಳಲು ‘ವೀಸಾ’ ಇತ್ಯಾದಿ ಹೊಂದಿಕೊಂಡು; ತಮಿಳುನಾಡಿನ ಇತರ ನಾಲ್ವರ ಸಹಿತ ರಷ್ಯಾಕ್ಕೆ ಪ್ರಯಾಣಿಸಿದ್ದಾರೆ.ರಷ್ಯಾದಲ್ಲಿ ಈ ಜಾಲದ ನಂಟು ಹೊಂದಿರುವ ಮಂದಿ; ಐವರು ಭಾರತೀಯ ಈ ಯುವಕರನ್ನು ಕಳೆದ ಎರಡೂವರೆ ತಿಂಗಳಿನಿಂದ ದುಡಿಸಿಕೊಂಡರೂ; ಯಾವದೇ ಸಂಬಳ ಇತ್ಯಾದಿ ನೀಡದೆ ವಂಚಿಸಿದ್ದಾರೆ. ಈ ಬೆಳವಣಿಗೆಯಿಂದ ಕಂಗಾಲಾಗಿರುವ ಯುವಕರು; ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್&divound; Àಲ್ಲಿರುವ; ಭಾರತೀಯ ಮೂಲದ ಹೊಟೇಲ್ ಉದ್ಯಮಿ ಯೊಬ್ಬರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಉದ್ಯಮಿ ಭಾರತೀಯ ರಾಯಭಾರಿ (ಮೊದಲ ಪುಟದಿಂದ) ಕಚೇರಿಗೆ ಸುಳಿವು ನೀಡಿದ್ದಾರೆ. ಅಷ್ಟರಲ್ಲಿ ಈ ವಂಚನೆ ಜಾಲದ ಅಲ್ಲಿನ ವ್ಯಕ್ತಿಯೋರ್ವ ಈ ಯುವಕರನ್ನು ಭೇಟಿಯಾಗಿ; ತಾನು ವಕೀಲನಾಗಿದ್ದು, ನೆರವು ಕಲ್ಪಿಸುವದಾಗಿ ನಂಬಿಸಿದ್ದಲ್ಲದೆ; ಅಲ್ಲಿನ ಪೊಲೀಸರ ಮೂಲಕ ಬಂಧಿಸುವ ಹುನ್ನಾರ ನಡೆಸಿದ್ದಾನೆ. ಈ ಸಂದರ್ಭ ಎಚ್ಚೆತ್ತುಕೊಂಡಿರುವ ಚೆನ್ನೈ ಮೂಲದ ಯುವಕನೊಬ್ಬ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದು; ಮಡಿಕೇರಿಯ ವಿನಯ್ ತಂದೆಗೂ ಮಾಹಿತಿ ತಲಪಿದೆ.
ಹೀಗಾಗಿ ವಿನಯ್ ತಂದೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ತಮ್ಮ ಮಗ ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಆ ಕೂಡಲೇ ಶಾಸಕರು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯದ ಗಮನ ಸೆಳೆದಿದ್ದಾರೆ.
ಆ ಮೇರೆಗೆ ಕೇಂದ್ರ ವಿದೇಶಾಂಗ ಸಚಿವಾಲಯದ ಮುಖಾಂತರ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ; ಮಡಿಕೇರಿಯ ವಿನಯ್ ಸಹಿತ ಐವರು ಭಾರತೀಯ ಯುವಕರು; ಸದ್ದಾಂ ಹುಸೇನ್ ಎಂಬಾತನ ಮೂಲಕ ವಂಚನೆಗೆ ಒಳಗಾಗಿರುವ ಕುರಿತು ರಾಯಭಾರಿ ಕಚೇರಿಗೆ ವಿವರವಾದ ದೂರು ಸಲ್ಲಿಸಲಾಗಿದೆ. ಇನ್ನೊಂದೆಡೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಸಚಿವ ಡಿ.ವಿ. ಸದಾನಂದಗೌಡ ಅವರುಗಳು; ನವದೆಹಲಿಯ ‘ಮದದ್’ (ಒಂಆಂಆ) (ವಿದೇಶಾಂಗ ನೆರವು ಕೇಂದ್ರ) ಮೂಲಕ ವಂಚಿತ ಯುವಕರ ಪರವಾಗಿ ರಷ್ಯಾದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಲಿಖಿತ ದೂರಿನ ಮುಖಾಂತರ ಸಮಗ್ರ ಮಾಹಿತಿ ರವಾನಿಸಿದ್ದಾರೆ.
ಆ ಬೆನ್ನಲ್ಲೇ ಇದೀಗ ಈ ಐವರು ಯುವಕರಿಗೆ; ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ವಸತಿಯೊಂದಿಗೆ ತಕ್ಷಣ ಆಸರೆ ಕಲ್ಪಿಸಿದ್ದಾರೆ. ಇಂದು ಮಡಿಕೇರಿಯ ಯುವಕ ವಿನಯ್ ಜೊತೆಗೆ ಪೋಷಕರು ಮಾತುಕತೆ ನಡೆಸಿದ್ದು; ಮಂಗಳವಾರದ ವೇಳೆಗೆ ಭಾರತಕ್ಕೆ ಹಿಂತಿರುಗುವ ದಿಸೆಯಲ್ಲಿ ಕೇಂದ್ರ ಸರಕಾರದಿಂದ ನೆರವು ಲಭಿಸುವ ಆಶಯ ವ್ಯಕ್ತಗೊಂಡಿದೆ.
ಭಾರತೀಯ ಯುವಕರು ಚೆನ್ನೈನ ಜಾಲದಿಂದ ಹೊಂದಿಕೊಂಡಿರುವ ‘ವೀಸಾ’ ಇತ್ಯಾದಿ ನಕಲಿ ಎಂದು ಅಲ್ಲಿನ ಅಧಿಕಾರಿಗಳು ದೃಢಪಡಿಸಿದ್ದಾರೆ. ಇಂತಹ ವಂಚನೆಯ ಜಾಲಕ್ಕೆ ಕೊಡಗಿನ ಯುವಕರು ಸಿಲುಕದಂತೆ ಜಾಗೃತರಾಗಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ‘ಶಕ್ತಿ’ ಮೂಲಕ ಸಲಹೆ ನೀಡಿದ್ದಾರೆ. -ಶ್ರೀಸುತ