ಮಡಿಕೇರಿ, ಆ. 16: ಮಹಾ ಪ್ರವಾಹ ಸಂಕಷ್ಟದ ನಡುವೆ ಕೊಡಗಿನ ನದಿ ದಂಡೆ ವ್ಯಾಪ್ತಿಯ ಮನೆಗಳನ್ನು ತೆರವುಗೊಳಿಸುವ ಕುರಿತು ಮಾತುಗಳು ಕೇಳಿ ಬರುತ್ತಿದ್ದು, ತೆರವು ಕಾರ್ಯಾಚರಣೆಗೂ ಮೊದಲು ಸ್ಥಳೀಯ ನಿವಾಸಿಗಳಿಗೆ ಸೂಕ್ತ ಆಶ್ರಯವನ್ನು ಕಲ್ಪಿಸÀಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕೆ.ಎ. ಯಾಕುಬ್ ಒತ್ತಾಯಿಸಿದ್ದಾರೆ.

ಬಡವರು ಹಾಗೂ ಕೂಲಿ ಕಾರ್ಮಿಕರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಶ್ರಯ ಪಡೆದಿದ್ದು, ನಿವೇಶನ ಮತ್ತು ಮನೆಯ ಹಕ್ಕು ಪತ್ರವನ್ನು ಆಯಾ ಗ್ರಾ.ಪಂ. ಮೂಲಕ ಪಡೆದುಕೊಂಡಿದ್ದಾರೆ. ಅಲ್ಲದೆ ಕಾಲಕಾಲಕ್ಕೆ ಸರಿಯಾಗಿ ಕಂದಾಯ ಪಾವತಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ತಮ್ಮ ಬದುಕನ್ನೇ ಕಳೆದುಕೊಂಡ ಅನೇಕರು ಮನೆ ಮತ್ತು ದಾಖಲೆಗಳನ್ನು ಕೂಡ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಸಂತ್ರಸ್ತರ ಮೇಲೆ ದಾಖಲೆಗಳಿಗಾಗಿ ಒತ್ತಡ ಹೇರದೆ ಗ್ರಾ.ಪಂ.ನಲ್ಲಿ ಲಭ್ಯವಿರುವ ದಾಖಲೆಗಳಿಗೆ ಅನುಗುಣವಾಗಿ ಪರಿಹಾರವನ್ನು ವಿತರಿಸಬೇಕು ಮತ್ತು ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಬೇಕೆಂದು ಯಾಕುಬ್ ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ನದಿಯಲ್ಲಿ ತುಂಬಿದ ಹೂಳು ಹಾಗೂ ಮರಗಳು ಜಲಾಶಯಗಳಿಗೂ ಹಾನಿ ಉಂಟು ಮಾಡುವ ಸಾಧ್ಯತೆಗಳಿದ್ದು, ಆಡಳಿತ ವ್ಯವಸ್ಥೆ ತಕ್ಷಣ ಎಚ್ಚತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.