ಮಡಿಕೇರಿ, ಆ.16 : ಬ್ರಹ್ಮಗಿರಿ ಬೆಟ್ಟದ ಸಮೀಪ ರೆಸಾರ್ಟ್ ನಿರ್ಮಾಣ ಮಾಡಲು ಕಾಮಗಾರಿ ಕೈಗೊಂಡಿರುವ ಸರಕಾರಿ ನೌಕರನನ್ನು ತಕ್ಷಣ ಅಮಾನತುಗೊಳಿಸಿ ಯೋಜನೆಯಲ್ಲಿ ಶಾಮೀಲಾಗಿರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆ ಪ್ರಮುಖ ಉಳ್ಳಿಯಡ ಎಂ.ಪೂವಯ್ಯ, ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಯಾಗಿರುವ ತಲಕಾವೇರಿ ಕ್ಷೇತ್ರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿರುವದು ಹೇಯ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಿಯರಾಗಿದ್ದುಕೊಂಡೇ ಜವಾಬ್ದಾರಿಯುತ ಸ್ಥಾನದಲ್ಲಿರುವ ನೌಕರ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಯಾವದೇ ಆತಂಕವಿಲ್ಲದೆ ವಿಶಾಲ ಮೈದಾನದ ರೂಪದಲ್ಲಿ ಕಾಮಗಾರಿ ಆರಂಭಿಸಿರುವದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತಿದೆ. ವ್ಯಾಪಾರೋದ್ಯಮಗಳ ಮೂಲಕ ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸುವದನ್ನು ಸಹಿಸಲು ಸಾಧ್ಯವಿಲ್ಲ. ಭಾಗಮಂಡಲ ಹೋಬಳಿ, ಚೇರಂಗಾಲದ ಕೋಳಿಕಾಡು ಗ್ರಾಮದಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಬ್ರಹ್ಮಗಿರಿ ಬೆಟ್ಟಕ್ಕೆ ಅಪಾಯ ಸಂಭವಿಸುವ ರೀತಿಯಲ್ಲಿ ಕಾಮಗಾರಿಗೆ ಅನುಮತಿ ನೀಡಿದವರು ಯಾರು? ಸಣ್ಣ ರೈತರು ಅಥವಾ ಬೆಳೆಗಾರರು ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದರೆ ದೊಡ್ಡ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಅರಣ್ಯ ಇಲಾಖೆ ಈ ರೆಸಾರ್ಟ್ ನಿರ್ಮಾಣಕ್ಕೆ ಮರಗಳನ್ನು ಕಡಿದು, ಬೆಟ್ಟವನ್ನು ಅಗೆಯುತ್ತಿದ್ದಾಗ ಏನು ಮಾಡುತ್ತಿದ್ದರು ಎಂದು ಪೂವಯ್ಯ ಪ್ರಶ್ನಿಸಿದರು. ಎರಡು ಬೃಹತ್ ಮೈದಾನದಷ್ಟು ಜಾಗವನ್ನು ಸಮತಟ್ಟು ಮಾಡಲಾಗಿದ್ದು, ಕೆರೆ ಮತ್ತು ಕಾಟೇಜ್ ನಿರ್ಮಿಸಲು ಬೆಟ್ಟವನ್ನು ಕೊರೆಯಲಾಗಿದೆ. ಈ ಕಾಮಗಾರಿಗಳು ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಗ್ರಾ.ಪಂ ಯ ಗಮನಕ್ಕೆ ಬಾರದೇ ಇರುವದು ಆಶ್ಚರ್ಯವನ್ನು ಉಂಟುಮಾಡಿದೆ ಎಂದರು.
ಸೇವೆಯಲ್ಲಿರುವ ಒಬ್ಬ ಸರ್ಕಾರಿ ನೌಕರ ವ್ಯಾಪಾರೋದ್ಯಮದಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕಾದರೆ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಈ ಕಾನೂನು ರೆಸಾರ್ಟ್ ನಿರ್ಮಿಸುತ್ತಿರುವ ವ್ಯಕ್ತಿಗೆ ಅನ್ವಯಿಸುವುದಿಲ್ಲವೇ ಎಂದು ಪೂವಯ್ಯ ಪ್ರಶ್ನಿಸಿದರು. ನಿರಂತರ ಜೆಸಿಬಿ ಯಂತ್ರ ಬಳಸಿ ಬೆಟ್ಟ ಗುಡ್ಡಗಳಿಗೆ ಹಾನಿ ಮಾಡಿದ ಪರಿಣಾಮ ಬ್ರಹ್ಮಗಿರಿ ಬೆಟ್ಟ ಕುಸಿದು ಪವಿತ್ರ ತೀರ್ಥ ಕೇಂದ್ರಕ್ಕೆ ಅಪಾಯ ಎದುರಾದರೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಸಂಬಂಧಿಸಿದ ಸರ್ಕಾರಿ ನೌಕರನನ್ನು ಅಮಾನತುಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವದಲ್ಲದೇ ಕಾನೂನಿನ ಹೋರಾಟಕ್ಕೂ ಮುಂದಾಗುವದಾಗಿ ಎಚ್ಚರಿಕೆ ನೀಡಿದರು. ಯೋಜನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮುಂಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ಪೂವಯ್ಯ ತಿಳಿಸಿದರು.
ವೇದಿಕೆಯ ಸಂಚಾಲಕ ಕೊಕ್ಕಲೆರ ಎ. ಕಾರ್ಯಪ್ಪ ಮಾತನಾಡಿ, ಅತ್ಯಂತ ಸೂಕ್ಷ್ಮ ಪ್ರದೇಶವಾದ ಬ್ರಹ್ಮಗಿರಿ ಬೆಟ್ಟದ ಸಮೀಪ ಅಕ್ರಮ ಸಕ್ರಮದಡಿ ಏಕರೆಗಟ್ಟಲೆ ಭೂಮಿಯನ್ನು ಮಂಜೂರು ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಬೃಹತ್ ಯೋಜನೆಗಾಗಿ ಗುಡ್ಡವನ್ನು ಸಮತಟ್ಟುಮಾಡಲು ಅನೇಕ ಮರಗಳನ್ನು ಕಡಿದಿರುವ ಸಂಶಯವಿದೆ. ಅಧಿಕ ಸಂಖ್ಯೆಯ ಕಾರ್ಮಿಕರನ್ನು ಕೂಡ ಬಳಸಿಕೊಳ್ಳಲಾಗಿದ್ದು, ಇಷ್ಟೆಲ್ಲಾ ಕಾಮಗಾರಿ ನಡೆಯುತ್ತಿದ್ದರೂ ಯಾರ ಗಮನಕ್ಕೆ ಬಾರದೆ ಇರುವದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.
ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಪ್ರಕೃತಿಗೆ ವಿರುದ್ಧವಾಗಿ ರೆಸಾರ್ಟ್‍ಗಳು ನಿರ್ಮಾಣವಾಗುತ್ತಿದ್ದು, ಈ ನಿಯಮ ಬಾಹಿರ ಯೋಜನೆಗೆ ಬೆಂಗಳೂರು ಮಟ್ಟದಲ್ಲಿ ಅನುಮತಿ ಪಡೆಯಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಮಣವಟ್ಟಿರ ದೊರೆ ಸೋಮಣ್ಣ, ಮಣವಟ್ಟಿರ ಪಾಪು ಚಂಗಪ್ಪ ಹಾಗೂ ಪುಡಿಯಂಡ ಕೆ. ಮುತ್ತಪ್ಪ ಉಪಸ್ಥಿತರಿದ್ದರು.