ಮಡಿಕೇರಿ, ಆ. 16: ಕೊಡಗು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಹಾಗೂ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಬೇಕೆಂದು ಕೊಡವ ಭಾಷಿಕ ಸಮುದಾಯಗಳ ಕೂಟ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಒಕ್ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಹಾಗೂ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರದಲ್ಲಿ ಕೊಡಗಿಗೆ ಸಚಿವ ಸ್ಥಾನ ನೀಡುವಂತೆ ಕೋರಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹೊರ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ನೇಮಕಗೊಳ್ಳುತ್ತಿದ್ದು, ಯಾವ ಕೆಲಸ, ಕಾರ್ಯಗಳು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಬಂದು, ಹೋಗುವ ಸಚಿವರಿಗೆ ಸಲ್ಲಿಸಿದ ಮನವಿಗಳು ಅವರೊಂದಿಗೆ ಮರಳುತ್ತಿದೆಯೇ ಹೊರತು ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲ ಎಂದು ಗಮನ ಸೆಳೆದಿದ್ದಾರೆ.

ಅಲ್ಲದೆ ಕಳೆದ ಎರಡು, ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜಿಲ್ಲೆ ನಲುಗಿ ಹೋಗಿದ್ದು, ಈ ರೀತಿಯ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿ ಬೇಕಾಗಿದೆ. ಸ್ಥಳೀಯರೇ ಸಚಿವರಾದರೆ ಕಾರ್ಯಾಚರಣೆ ಸುಲಭವಾಗಲಿದೆ ಮತ್ತು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದನ ಸಿಗಲಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.