ಪೊನ್ನಂಪೇಟೆ, ಆ.16: ಬೇಗೂರಿನ ಪಟ್ಟಕೇರಿ ಅಂಬಲ ಒಕ್ಕೂಟದ ವತಿಯಿಂದ ಬೈರಂಡ ಮೀಟಿ ಮುತ್ತಪ್ಪ ಅವರ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಕೆಸರಿನೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು. ಕೆಸರು ಗದ್ದೆಯಲ್ಲಿ ಉರುಳಾಡಿ ಮೈಕೈಗೆಲ್ಲ ಕೆಸರು ಮೆತ್ತಿಕೊಂಡು ಪುಟ್ಟ ಮಕ್ಕಳು ಖುಶಿ ಪಟ್ಟರೆ, ಮಹಿಳೆಯರು ಕೂಡ ಕ್ರೀಡೆಯಲ್ಲಿ ಪಾಲ್ಗೊಂಡು ಸಂತಸಪಟ್ಟರು.
ಕ್ರೀಡಾಕೂಟಕ್ಕೂ ಮುನ್ನ ಗದ್ದೆ ಬದಿಯಲ್ಲಿ 73 ನೇ ವರ್ಷದ ಸ್ವಾತಂತ್ರ್ಯದಿನ ಆಚರಿಸಲಾಯಿತು. ಪೂಳೆಮಾಡು ಈಶ್ವರ ದೇವಸ್ಥಾನ ತಕ್ಕರಾದ ಮತ್ರಂಡ ಎಸ್. ಪೂಣಚ್ಚ ಧ್ವಜಾರೋಹಣ ನೆರವೇರಿಸಿದರು. ಒಕ್ಕೂಟದ ಅಧ್ಯಕ್ಷರಾದ ಮತ್ರಂಡ ರಾಜ ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟವನ್ನು ಅರಮಣಮಾಡ ಮೋಹನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಬೇಗೂರಿನ ಪ್ರಗತಿಪರ ರೈತ ಮಹಿಳೆ ಬೈರಂಡ ಮೀಟಿ ಮುತ್ತಪ್ಪನವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕೂಟದ ಕಾರ್ಯದರ್ಶಿ ಚೋಡುಮಾಡ ಅಪ್ಪು ಸುಬ್ಬಯ್ಯ ಹಾಜರಿದ್ದರು.
ವಿಜೇತರು: ರೋಚಕತೆಯಿಂದ ಕೂಡಿದ್ದ ಹಗ್ಗಜಗ್ಗಾಟ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪ್ರಮೀಳ ಅವರ ತಂಡ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡರೆ, ಪ್ರೇಮ ಅವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ಮಹಾವಿಷ್ಣು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸವೆನ್ ಸ್ಟಾರ್ಸ್ ತಂಡ ಪಡೆದುಕೊಂಡಿತು. ಕೆಸರು ಗದ್ದೆ ಕಾಲ್ಚೆಂಡು ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಲ್ಲಂಡ ತಂಡ ತನ್ನದಾಗಿಸಿಕೊಂಡರೆ, ಚೋಡುಮಾಡ ತಂಡ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ಎಂ.ಎಸ್.ಪೊನ್ನಪ್ಪ ಪ್ರಥಮ, ನಟೇಶ್ ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಎಂ.ಎ.ಜನನಿ ಪ್ರಥಮ, ಪದ್ಮಿನಿ ದ್ವಿತೀಯ ಸ್ಥಾನ ಪಡೆದುಕೊಂಡರು. ಪೈರು ಕೀಳುವ ಸ್ಪರ್ಧೆಯಲ್ಲಿ ಮತ್ರಂಡ ಪಾರ್ವತಿ ಮೋಟಯ್ಯ ಪ್ರಥಮ, ಚೇಂದಿರ ಕುಜ್ಞಂಕ್ಕಿ ಚಂಗಪ್ಪ ದ್ವಿತೀಯ ಸ್ಥಾನ ಪಡೆದುಕೊಂಡರು. ಪುರುಷರ ವಿಷದ ಚೆಂಡು ಸ್ಪರ್ಧೆಯಲ್ಲಿ ಸುಬ್ರಮಣಿ ಪ್ರಥಮ, ಪೊನ್ನಪ್ಪ ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಷದ ಚೆಂಡು ಸ್ಪರ್ಧೆಯಲ್ಲಿ ಚೋಡುಮಾಡ ಕಸ್ತೂರಿ ಪ್ರಥಮ, ಮತ್ರಂಡ ಪಾರ್ವತಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರಾಥಮಿಕ ಶಾಲಾ ವಿಭಾಗದ ಬಾಲಕರ 100 ಮೀ. ಓಟದ ಸ್ಪರ್ಧೆಯಲ್ಲಿ ಪವನ್ ಪ್ರಥಮ, ರಾಶಿಕ್ ದ್ವಿತೀಯ ಸ್ಥಾನ, ಬಾಲಕಿಯರ 100 ಮೀ.ಓಟದ ಸ್ಪರ್ಧೆಯಲ್ಲಿ ನವ್ಯ ಪ್ರಥಮ, ಯಜ್ಞ ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ಬಾಲಕರ 100 ಮೀ. ಓಟದ ಸ್ಪರ್ಧೆಯಲ್ಲಿ ಹರ್ಷ ಪ್ರಥಮ, ಕಿರಣ್ ಕಾರ್ಯಪ್ಪ ದ್ವಿತೀಯ ಸ್ಥಾನ, ಬಾಲಕಿಯರ 100 ಮೀ. ಸ್ಪರ್ಧೆಯಲ್ಲಿ ಸುಮಿತ್ರ ಪ್ರಥಮ, ಜಸ್ಮಿ ದ್ವಿತೀಯ ಸ್ಥಾನ ಪಡೆದುಕೊಂಡರು. ಕಾರ್ಮಿಕರಿಗಾಗಿ ನಡೆದ 100 ಮೀ. ಓಟದ ಸ್ಪರ್ಧೆಯಲ್ಲಿ ಪಿ.ಆರ್.ಅಯ್ಯಪ್ಪ ಪ್ರಥಮ, ಪಿ. ಸುಬ್ರಮಣಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಬೇಗೂರಿನ ಪಟ್ಟಕೇರಿ ಅಂಬಲ ಒಕ್ಕೂಟದ ಸದಸ್ಯರಿಗಾಗಿ ನಡೆದ ಪುರುಷರ ವಿಷದ ಚೆಂಡು ಸ್ಪರ್ಧೆಯಲ್ಲಿ ನಾಚಪ್ಪ ಪ್ರಥಮ, ಅರ್ಜುನ್ ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಧರಣಿ ಪ್ರಥಮ, ಶೈಲ ದ್ವಿತೀಯ ಸ್ಥಾನ ಪಡೆದುಕೊಂಡರು. ಮಕ್ಕಳ ವಿಭಾಗದಲ್ಲಿ ಹರ್ಷ ಪ್ರಥಮ, ಕಿರಣ್ ಕಾರ್ಯಪ್ಪ ದ್ವಿತೀಯ ಸ್ಥಾನ ಪಡೆದುಕೊಂಡರು. ನೆರೆದಿದ್ದವರಿಗೆ ಮಧ್ಯಾಹ್ನದ ಬೋಜನ ವ್ಯವಸ್ಥೆ ಮಾಡಲಾಗಿತ್ತು.
-ಚಿತ್ರ. ವರದಿ: ಚನ್ನನಾಯಕ