ನಾಪೋಕ್ಲು, ಆ. 14: ನಾಪೋಕ್ಲುವಿನ ಚೆರಿಯಪರಂಬು ರಸ್ತೆಯಲ್ಲಿ ಯಾರೋ ಕೋಳಿ ಮಾಂಸದ ತ್ಯಾಜ್ಯವನ್ನು ಎಸೆದು ಗಲೀಜು ಮಾಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಚೆರಿಯಪ ರುಂಬುವಿನ ಹಾಕಿ ನಮ್ಮೆ ನಡೆಯುವ ಕ್ರೀಡಾಂಗಣದ ಸಮೀಪದ ರಸ್ತೆಯಲ್ಲಿ ಕೋಳಿ ಮಾಂಸದ ವ್ಯಾಪಾರಿಗಳು ಕೋಳಿ ತ್ಯಾಜ್ಯವನ್ನು ಸುರಿದಿದ್ದು, ಬೀದಿ ನಾಯಿಗಳು ರಸ್ತೆಯಿಡೀ ತ್ಯಾಜ್ಯವನ್ನು ಎಳೆದು ಹಾಕಿರುವದರಿಂದ ಪಾದಚಾರಿಗಳು ತಿರುಗಾಡದಂತಾಗಿದೆ. ದುರ್ವಾಸನೆ ಹೆಚ್ಚಾಗಿರುವದರಿಂದಲೂ ಕೂಡ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯ ನಿವಾಸಿ ಹನೀಫ್ ಮಾತನಾಡಿ, ಭಾರೀ ಮಳೆಯಿಂದ ಊರಿನವರು ನೀರಿನಲ್ಲಿ ಮುಳುಗಿ ಸಾಯುವಂತಹ ಸನ್ನಿವೇಶದಲ್ಲಿರುವ ಇಂದಿನ ದಿನಗಳಲ್ಲಿ ಕೋಳಿ ಮಾಂಸ ವ್ಯಾಪಾರಿಗಳು ಈ ರೀತಿ ಅಮಾನುಷವಾಗಿ ಕೋಳಿ ಮಾಂಸದ ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆದಿರುವದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ಪುಕಾರು ನೀಡಲು ಹೋದಾಗ ಪಂಚಾಯಿತಿಯ ಗಮನಕ್ಕೆ ತರಲು ತಿಳಿಸಿದ ಮೇರೆಗೆ ಪಂಚಾಯಿತಿಗೆ ದೂರು ನೀಡಿರುವದಾಗಿ ಹೇಳಿದರು.
ಈ ಕುರಿತು ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮತ್ತು ಪಿ.ಡಿ.ಓ. ಅವರು ಮಾತನಾಡಿ, ಹನೀಫ್ ಪಂಚಾಯಿತಿಗೆ ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲಿಸಿದ್ದು, ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದಕ್ಕೆ ಯಾರಾದರೂ ಈ ರೀತಿ ಸಾರ್ವಜನಿಕವಾಗಿ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯವನ್ನುಂಟುಮಾಡಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.