ವೀರಾಜಪೇಟೆ, ಆ. 15 : ವೀರಾಜಪೇಟೆ ಬಳಿ ಕೆದಮುಳ್ಳೂರುವಿನ ತೋರ ಗ್ರಾಮದ ಬಳಿಯ ಭಾರೀ ಮಳೆಯಿಂದ ಭೂಕುಸಿತವಾದ ಕೊರ್ತಿಕಾಡು ಪ್ರದೇಶದಲ್ಲಿ 6ಮೃತದೇಹಗಳ ಶೋಧ ಮುಂದುವರೆದಿದೆ. ನಿನ್ನೆ ದಿನ ಅಪ್ಪುವಿನ ಮೃತದೇಹ ಪತ್ತೆಯಾದ ಸನಿಹದಲ್ಲಿಯೇ ಅವರ ಕುಟುಂಬದ ಇನ್ನು ಮೂರು ಮೃತದೇಹಗಳಿರಬಹುದೆಂದು ಎನ್.ಡಿ.ಆರ್.ಎಫ್ ಹಾಗೂ ಇತರ ತಂಡಗಳು ಶೋಧ ಮುಂದುವರೆಸಿದ್ದರೂ ಯಾವದೇ ಮೃತದೇಹದ ಸುಳಿವು ಸಿಕ್ಕಿಲ್ಲ ಎಂದು ತಾಲೂಕು ತಹಶೀಲ್ದಾರ್ ಪುರಂದರ ತಿಳಿಸಿದ್ದಾರೆ. ತಾ. 14ರಂದು ತೋರದ ಕೊರ್ತಿಕಾಡಿನ ಮಣ್ಣಿನೊಳಗೆ ದೊರೆತ ಅಪ್ಪುವಿನ ಮೃತದೇಹಕ್ಕೆ ಸಂಬಂಧಿಸಿದಂತೆ ಆತನ ಪರಿಹಾರ ವಿತರಣೆಗೆ ಗೊಂದಲ ಉಂಟಾಗಿರುವದರಿಂದ ಪರಿಹಾರಕ್ಕಾಗಿ ಕೋರಿರುವ ಎರಡು ತಂಡಗಳನ್ನು ವಿಚಾರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಅಪ್ಪುವಿನ ವಾರೀಸುದಾರರನ್ನು ಖಚಿತ ಪಡಿಸಿದ ನಂತರ ಅಂತಿಮವಾಗಿ ತಾಲೂಕು ಆಡಳಿತದಿಂದ ತೀರ್ಮಾನಿಸಲಾಗುವದೆಂದು ವಿವಾದದ ವಿಚಾರಣೆ ಹಾಗೂ ಸಾಕ್ಷ್ಯವನ್ನು ಸಂಗ್ರಹಿಸುತ್ತಿರುವ ರೆವಿನ್ಯೂ ಅಧಿಕಾರಿ ಪಳಂಗಪ್ಪ ತಿಳಿಸಿದರು.