ಚೆಟ್ಟಳ್ಳಿ: ಸಮೀಪದ ಕಂಡಕರೆ ತಖ್ವಾ ಮಸ್ಜಿದ್ ಕಮಿಟಿ ವತಿಯಿಂದ ಬಕ್ರೀದ್ ಹಬ್ಬ ಆಚರಿಸಲಾಯಿತು. ಬಕ್ರೀದ್ ನಮಾಜ್ ನೇತೃತ್ವವನ್ನು ಮುಸ್ತಫಾ ಸಖಾಫಿ ವಹಿಸಿದ್ದರು. ನಮಾಜ್ ನಂತರ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭ ಮಹಲ್ ಅಧ್ಯಕ್ಷ ಹನೀಫ್ ಮುಸ್ಲಿಯಾರ್ ಕಾರ್ಯದರ್ಶಿ ರಫಿ, ಗಫೂರ್, ರಜಾಕ್ ಇದ್ದರು.

ಸಂತ್ರಸ್ತರ ಸಹಾಯಕ್ಕೆ ಹಣ ಸಂಗ್ರಹ

ಕಡಂಗ ಬದ್ರಿಯಾ ಜುಮಾ ಮಸೀದಿ ಹಾಗೂ ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ನಮಾಜ್ ನಂತದ ಸಂತ್ರಸ್ತರ ಸಹಾಯಕ್ಕೆ ಹಣ ಸಂಗ್ರಹ ಮಾಡಲಾಯಿತು.

ಈ ಸಂದರ್ಭ ಬದ್ರಿಯಾ ಮಸೀದಿ ಖತೀಬರಾದ ಹಾರಿಸ್ ಸಖಾಫಿ, ಮುಹಯದ್ದೀನ್ ಮಸೀದಿ ಖತೀಬರಾದ ಮುಹಯದ್ದೀನ್ ಫೈಝಿ ಇದ್ದರು.

ಕಲ್ಕಂದೂರಿನಲ್ಲಿ ಆಚರಣೆ

ಸೋಮವಾರಪೇಟೆ ಸಮೀಪದ ಕಲ್ಕಂದೂರಿನಲ್ಲಿ ಸರಳವಾಗಿ ಬಕ್ರೀದ್ ಆಚರಣೆ ಮಾಡಲಾಯಿತು. ನಮಾಜ್ ನೇತೃತ್ವವನ್ನು ಸಮದ್ ಸಖಾಫಿ ಕೊಂಡಂಗೇರಿ ವಹಿಸಿದ್ದರು.

ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಕೊಂಡಂಗೇರಿಯಲ್ಲಿ ಆಚರಣೆ

ಕೊಂಡಂಗೇರಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳು ಮಳೆಗೆ ಮುಳುಗಿ, ಸಾವಿರಕ್ಕೂ ಹೆಚ್ಚು ಜನರು ಇಲ್ಲಿ ತೆರೆದಿರುವ ಮಸೀದಿ ಹಾಗೂ ಶಾಲೆಯಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಕೊಂಡಂಗೇರಿಯಲ್ಲಿ ಬಕ್ರೀದ್ ಹಬ್ಬವನ್ನು ಸಂತ್ರಸ್ತರೊಂದಿಗೆ ಇಲ್ಲಿನ ಜನತೆ ಆಚರಿಸಿದರು. ಬಕ್ರೀದ್ ನಮಾಜ್ ನಂತರ ಎಲ್ಲರಿಗೂ ವಿಶೇಷ ಊಟ ಏರ್ಪಡಿಸಲಾಗಿತ್ತು.

ಬಕ್ರೀದ್ ಹಬ್ಬ ಸರಳ ಆಚರಣೆ

ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ತರ ನೋವನ್ನರಿತ ಕುಶಾಲನಗರದ ಮುಸಲ್ಮಾನರು, ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದರು. ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ದಿನದಂದು ಬೆಳಿಗ್ಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನೆರೆ ಸಂತ್ರಸ್ತರಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಹಬ್ಬದ ದಿನದಂದು ಹಳೆಯ ಉಡುಪುಗಳನ್ನು ಧರಿಸುವ ಮೂಲಕ ಹಾಗೂ ಆಡಂಬರವಿಲ್ಲದೇ ಹಬ್ಬವನ್ನು ಸರಳವಾಗಿ ಆಚರಿಸುವ ಮೂಲಕ ನೆರೆ ಸಂತ್ರಸ್ತರ ಮೇಲಿನ ಕಾಳಜಿಯನ್ನು ತೋರ್ಪಡಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನೆರೆಸಂತ್ರಸ್ತರಿಗಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷ ಸಲೀಂ ಹಾಗೂ ಜಾಮಿಯಾ ಮಸೀದಿ ಅಧ್ಯಕ್ಷ ಅಲೀಂ ಅವರು, ನೆರೆ ಪ್ರವಾಹಕ್ಕೆ ಸಿಲುಕಿದ ನಮ್ಮ ಸಹೋದದರು ನೋವಿನಲ್ಲಿರುವ ನಾವುಗಳು ಹಬ್ಬವನ್ನು ಆಚರಿಸುವದು ಸರಿಯಲ್ಲ. ತ್ಯಾಗ ಬಲಿದಾನದ ಹಬ್ಬವನ್ನು ನಾವೆಲ್ಲರೂ ಒಗ್ಗೂಡಿ ಸರಳವಾಗಿ ಆಚರಿಸುವದರ ಜೊತೆಗೆ ನೆರೆ ಸಂತ್ರಸ್ತರೊಂದಿಗೆ ಕೈಜೋಡಿಸೋಣ ಎಂದರು.

ಕುಶಾಲನಗರ ಹಿಲಾಲ್ ಮಸೀದಿ ಧರ್ಮಗುರುಗಳಾದ ಸೂಫಿ ದಾರಿಮಿ ಮತ್ತು ಜಾಮಿಯಾ ಮಸೀದಿ ಧರ್ಮಗುರು ಮೌಲಾನಾ ಮುಫ್ತಿ ಮುದಬ್ಬಿರ್ ಅವರ ನೇತೃತ್ವದಲ್ಲಿ ಬಕ್ರೀದ್ ಪ್ರಾರ್ಥನೆ ನಡೆಯಿತು.

ದಂಡಿನಪೇಟೆ, ಜನತಾ ಕಾಲೋನಿ, ನಂಜರಾಯಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮಸೀದಿಗಳಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸುವ ಮೂಲಕ ಸಹೋದರತೆಯ ಸಂದೇಶ ಸಾರಿದರು. ಈ ಸಂದರ್ಭ ಹಿಲಾಲ್ ಮಸೀದಿ ಕಾರ್ಯದರ್ಶಿ ಹಮೀದ್, ಪದಾಧಿಕಾರಿಗಳಾದ ಎರಮು, ಮುಸ್ತಫಾ, ಸಂಸು, ಅಜೀಜ್, ಕಲೀಲ್, ಆಬಿದ್, ರಫೀಕ್, ಜಾಮಿಯಾ ಮಸೀದಿ ಕಾರ್ಯದರ್ಶಿ ತನ್ವೀರ್ ಅಹ್ಮದ್, ಉಪಾಧ್ಯಕ್ಷ ಮುಹಮ್ಮದ್ ಇಕ್ಬಾಲ್, ರಫೀಕ್, ಶೆಫಿ, ಭಾಷಾ, ಮನ್ಸೂರ್, ಫೈರೋಜ್ ಹಾಗೂ ಇನ್ನಿತರರು ಇದ್ದರು. - ಕೆ.ಎಂ. ಇಸ್ಮಾಯಿಲ್ ಕಂಡಕರೆ‘ಸಂತ್ರಸ್ತರ ಕಣ್ಣೀರೊರೆಸೋಣ’

ಅತಿವೃಷ್ಟಿಯ ರುದ್ರನರ್ತನದಿಂದ ಜಿಲ್ಲೆಯಲ್ಲಿ ಹಲವಾರು ಸಾವು ನೋವುಗಳು ಸಂಭವಿಸಿದ್ದು, ಈ ಬಾರಿಯ ಬಕ್ರೀದ್ ಅನ್ನು ಸಂತ್ರಸ್ತರಿಗೆ ನೆರವಾಗುವ ಮೂಲಕ ಆಚರಿಸೋಣ ಎಂದು ಮಡಿಕೇರಿ ಎಂ.ಎಂ. ಮಸೀದಿಯ ಧರ್ಮಗುರು ಅಬ್ದುಲ್ ಹಮೀದ್ ಮದನಿ ಕರೆ ನೀಡಿದರು.

ಬಕ್ರೀದ್ ಅಂಗವಾಗಿ ಮಸೀದಿಯಲ್ಲಿ ನಿನ್ನೆ ಭಕ್ತ ಸಮೂಹವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಭ್ರಮದ ಹಬ್ಬದಾಚರಣೆಯನ್ನು ಕೈಬಿಟ್ಟು ಸಾಂಪ್ರದಾಯಿಕ ಹಾಗೂ ಸರಳ ರೀತಿಯಲ್ಲಿ ಹಬ್ಬದ ವಿಧಿ ವಿಧಾನಗಳನ್ನು ಕೈಗೊಳ್ಳುವದರೊಂದಿಗೆ ಅದ್ದೂರಿಯ ವೆಚ್ಚವನ್ನು ನೊಂದವರಿಗೆ ನೀಡೋಣ ಎಂದು ಮದನಿ ಹೇಳಿದರು. ಜಿಲ್ಲೆಯ ಪರಿಹಾರ ಕೇಂದ್ರಗಳಲ್ಲಿಂದು ಸಾವಿರಾರು ಮಂದಿ ಸಂತ್ರಸ್ತರಿದ್ದು, ಅವರಿಗೆ ಬೇಕಾದ ಬಟ್ಟೆ ಬರೆ, ಆಹಾರ ವಸ್ತುಗಳು ಮುಂತಾದವುಗಳನ್ನು ಒದಗಿಸುವದು ಪ್ರಸ್ತುತ ಪರಿಸ್ಥಿತಿಯಲ್ಲಿ ಉಳ್ಳವರ ಕರ್ತವ್ಯವಾಗಿದೆ. ಉಳ್ಳವರು ಇಲ್ಲದವರಿಗೆ ಕೈಲಾದ ಸಹಾಯ ಮಾಡುವ ಮೂಲಕ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಬೇಕು ಎಂದು ಹಮೀದ್ ಮದನಿ ಹೇಳಿದರು.

ಮಸೀದಿಯ ವತಿಯಿಂದ ಸಂತ್ರಸ್ತರ ನೆರವಿಗೆ ಹಣಕಾಸಿನ ಸಹಾಯ ಕೋರಿದಾಗ, ಪ್ರತಿಯೊಬ್ಬರೂ ಕೈಲಾದ ಧನ ಸಹಾಯವನ್ನು ನೀಡುವ ಮೂಲಕ ಮಾನವೀಯತೆ ಮೆರೆದರು. ದುರಂತಗಳು ಸಂಭವಿಸದಂತೆಯೂ ಸಂಕಷ್ಟಕ್ಕೊಳಗಾದವರು ಶೀಘ್ರ ಚೇತರಿಸಿಕೊಳ್ಳುವಂತೆಯೂ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.