ವಿಶೇಷ ವರದಿ:
ಕೆ. ಎಂ ಇಸ್ಮಾಯಿಲ್ ಕಂಡಕರೆ
ಚೆಟ್ಟಳ್ಳಿ, ಆ. 15: ಕೊಡಗಿನ ಜನತೆಗೆ ಮತೊಮ್ಮೆ ಮಳೆ ಕಣ್ಣೀರು ತಂದಿದೆ. ಪ್ರಸ್ತಕ ವರ್ಷ ಆಗಸ್ಟ್ 4 ರ ವರೆಗೆ ಮುಂಗಾರು ವಾಡಿಕೆಯಂತೆ ಬಾರದೆ ಜನರು ಮಳೆ ಇಲ್ಲ ಎಂಬ ಆತಂಕ ಮನೆ ಮಾಡಿತು. ತಾ. 4 ನಂತರ ಸುರಿದ ಆಶ್ಲೇಷ ಮಳೆ ಕೇವಲ ಒಂದೇ ಒಂದು ವಾರದಲ್ಲಿ ಕೊಡಗಿನ ಜನತೆಯ ಇಡೀ ಚಿತ್ರಣವೇ ಬುಡಮೇಲು ಮಾಡಿತು.
ಮಹಾ ಮಳೆ ಅಪ್ಪಳಿಸಿ ಹಲವು ಜನರ ಮನೆಗಳಿಗೆ ನೀರು ನುಗ್ಗಿ ಮನೆಗಳು ನೆಲಸಮವಾಗಿವೆ. ಇನ್ನೂ ಕೆಲವರ ಮನೆಗಳ ಚಿತ್ರಣವೇ ಇಲ್ಲದಂತಾಗಿದೆ. ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಜಿಲ್ಲೆ ಹಾಗೂ ರಾಜ್ಯದ ಹಲವು ಸಂಘ ಸಂಸ್ಥೆಗಳು ಜಿಲ್ಲೆಯ ಸಂತ್ರಸ್ತರಿಗೆ ಆಹಾರ ಧಾನ್ಯ, ತಮ್ಮಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಮಹಾ ಮಳೆಗೆ ಉತ್ತರ ಕೊಡಗಿನ ಹಲವು ಜನರ ತೋಟ ಮಣ್ಣು ಕುಸಿತಕ್ಕೆ ಬಲಿಯಾಗಿತ್ತು.
ಮನೆ ಕಳೆದುಕೊಂಡವರಿಗೆ ಹಲವು ಸಂಘ ಸಂಸ್ಥೆಗಳು ಉಚಿತ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದದ್ದು ಜಿಲ್ಲೆಯ ಜನತೆ ಸದಾ ನೆನಪಿಸುತ್ತಿದ್ದಾರೆ. ಅಲ್ಲದೇ ಕಳೆದ ವರ್ಷ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ ತೋಟದ ಒಂದು ಎಕರೆ ಜಾಗವನ್ನು ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ದಾನ ನೀಡಿದ್ದರು.
ಈ ಬಾರಿ ಕೊಂಡಂಗೇರಿ ಇತಿಹಾಸದಲ್ಲಿ ಕಂಡು, ಕೇಳರಿಯದ ಪ್ರವಾಹಕ್ಕೆ ತುತ್ತಾಗಿದೆ. ನೂರಾರು ಮನೆಗಳು ನೀರಿನಲ್ಲಿ ಮುಳುಗಿ ನೆಲಸಮವಾಗಿವೆ. ಕೆಲವು ಮನೆಗಳು ಪ್ರವಾಹಕ್ಕೆ ಸಿಲುಕಿ ಮಾಯವಾಗಿವೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಇಲ್ಲಿನ ಶಾಲೆ ಹಾಗೂ ಮಸೀದಿಯಲ್ಲಿನ ಪರಿಹಾರ ಕೇಂದ್ರದಲ್ಲಿ ಮನೆ ಕಳೆದುಕೊಂಡು ಮುಂದಿನ ದಾರಿ ಯಾವುದಯ್ಯಾ ಎನ್ನುತ್ತಿದ್ದಾರೆ.
ಕೊಂಡಂಗೇರಿಯಲ್ಲಿ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡ ವರಿಗೆ ಮನೆ ನಿರ್ಮಿಸಲು ಇಲ್ಲಿನ ಸ್ಥಳೀಯ ನಿವಾಸಿಯಾದ ಹೆಚ್.ಎಂ ಅಬ್ದುಲ್ಲಾ ಹಾಜಿ (ಉಮ್ಮಣಿ ಹಾಜಿ) ಎಂಬವರು ತಮ್ಮ ಕಾಫಿ ತೋಟದಲ್ಲಿ ಒಂದೂವರೆ ಎಕರೆ ಜಾಗವನ್ನು ಕೊಂಡಂಗೇರಿಯಲ್ಲಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಲು ದಾನ ನೀಡಿದ್ದಾರೆ.
ಅಬ್ದುಲ್ಲಾ ಹಾಜಿ ಅವರು ಇಲ್ಲಿನ ಸ್ಥಳೀಯ ಜಮಾಹತ್ ಆಡಳಿತ ಮಂಡಳಿಯವರೊಂದಿಗೆ ಚರ್ಚೆ ಮಾಡಿ ಜಾಗ ದಾನ ನೀಡಿರುವದನ್ನು ಘೋಷಣೆ ಮಾಡಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಜಾಗ ದಾನಿ ಅಬ್ದುಲ್ಲಾ ಹಾಜಿ ಕೊಡಗಿನಲ್ಲಿ ಕಳೆದ ವರ್ಷ ಸುರಿದ ಮಹಾ ಮಳೆ ಈ ವರ್ಷವೂ ಸುರಿದಿದೆ. ಕೊಂಡಂಗೇರಿಯಲ್ಲಿ ಮಳೆಗೆ ಹಲವು ಮನೆಗಳು ಮುಳುಗಡೆಯಾಗಿವೆ.
ಕೆಲವೊಂದು ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿವೆ. ನಮ್ಮೂರಿನಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ಜನರಿಗೆ ಮನೆ ನಿರ್ಮಿಸಲು ನನ್ನ ತೋಟದಲ್ಲಿ ಒಂದೂವರೆ ಎಕರೆ ಕಾಫಿ ತೋಟವನ್ನು ದಾನ ನೀಡಿದ್ದೇನೆ. ಈ ವಿಷಯದ ಕುರಿತು ಈಗಾಗಲೇ ಜಮಾಹತ್ನೊಂದಿಗೆ ಚರ್ಚಿಸಲಾಗಿದೆ ಎಂದರು.
ಬಾರದಿರಲಿ ಇಂತಹ ಪರಿಸ್ಥಿತಿ
ನನಗೆ ಮಾಹಿತಿ ತಿಳಿದ ಪ್ರಕಾರ ಕೊಂಡಂಗೇರಿಯಲ್ಲಿ 1955ರ ನಂತರ ಇಷ್ಟೊಂದು ಮಟ್ಟಿಗೆ ಅನಾಹುತ ಸಂಭವಿಸಿರಲಿಲ್ಲ. ಮನೆ ಕಳೆದುಕೊಂಡ ವರು ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಮನೆ ಕಟ್ಟಿದ್ದರು. ಇಂದು ನೀರು ಮುಳಗಡೆಯಾಗಿ ನಾಶವಾಗಿವೆ. ಮುಂದೆ ಯಾರಿಗೂ ಇಂತಹ ಭಯಾನಕ ಪರಿಸ್ಥಿತಿ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅಲ್ಲದೇ ಈ ಜಾಗವನ್ನು ನನ್ನ ಕುಟುಂಬದಿಂದ ಮರಣಹೊಂದಿ ದವರ ಹೆಸರಲ್ಲಿ ದಾನ ನೀಡಿದ್ದೇನೆ, ಎಲ್ಲರೂ ನನ್ನ ಕುಟುಂಬದವರಿಗೆ ಪ್ರಾರ್ಥನೆ ಮಾಡಬೇಕಾಗಿ ಕೇಳಿಕೊಂಡರು.
ಪ್ರಚಾರ ಬೇಡ: ಕೊಂಡಂಗೇರಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ನನ್ನ ಒಂದೂವರೆ ಎಕರೆ ತೋಟವನ್ನು ಎರಡು ದಿನಗಳ ಹಿಂದೆಯೇ ಜಮಾಹತ್ ಅವರಿಗೆ ಹಸ್ತಾಂತರಿ ಸಿದ್ದೆ. ನಾನು ಪತ್ರಿಕೆ, ಮಾಧ್ಯಮಗಳಲ್ಲಿ ಈ ವಿಷಯ ಪ್ರಚಾರ ಹಾಗೂ ನನ್ನ ಭಾವಚಿತ್ರ ಬರಬಾರದು ಎಂದಿದ್ದೆ. ಕೊಡಗು ಜಿಲ್ಲೆಯ ಬೇತ್ರಿ, ನೆಲ್ಲಿಹುದಿಕೇರಿ, ಗುಹ್ಯ ಹಾಗೂ ವಿವಿಧಡೆಯಲ್ಲಿ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿ ಕೊಡಲು ದಾನಿಗಳು ಮುಂದೆ ಬರಬೇಕು ಎಂದರು.
ಉಮ್ಮಣಿ ಹಾಜಿ: ಕೊಂಡಂಗೇರಿಯ ಹೆಚ್.ಎಂ. ಅಬ್ದುಲ್ಲಾ ಹಾಜಿ ಅವರು ಉಮ್ಮಣಿ ಹಾಜಿ ಎಂಬ ಹೆಸರಿನಲ್ಲಿ ಗುರುತಿಸಿ ಕೊಂಡಿದ್ದಾರೆ. ಇವರು ಕೊಂಡಂಗೇರಿ ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷರಾಗಿದ್ದಾರೆ.