ಮಡಿಕೇರಿ, ಆ. 14: ಮಡಿಕೇರಿಯಲ್ಲಿ ರಾಜಪರಂಪರೆಯ ಐತಿಹಾಸಿಕ ಕೋಟೆ ಹಾಗೂ ಅರಮನೆಯ ಸಂರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯವು ಅಕ್ಟೋಬರ್ 9ಕ್ಕೆ ಮುಂದೂಡಿದೆ. ಅರಮನೆಯು ಶಿಥಿಲಗೊಳ್ಳುತ್ತಿರುವ ಬಗ್ಗೆ ಸಚಿತ್ರ ವರದಿಯೊಂದಿಗೆ ಈ ಹಿಂದೆ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಆ ಬೆನ್ನಲ್ಲೇ ರಾಜ್ಯ ಉಚ್ಛ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಿ, ಅರ್ಜಿದಾರರ ಸಮಕ್ಷಮ ಕೋಟೆ ಹಾಗೂ ಅರಮನೆಯ ಪ್ರಸಕ್ತ ಪರಿಸ್ಥಿತಿಯನ್ನು ಸರ್ವೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿತ್ತು. ಈ ವರದಿಯನ್ನು ತಾ. 8ರಂದು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಈ ಸಂದರ್ಭ ವರದಿಯನ್ನು ಗಣನೆಗೆ ಪಡೆದುಕೊಂಡಿರುವ ರಾಜ್ಯ ಉಚ್ಛ ನ್ಯಾಯಾಲಯ ಮುಂದಿನ ವಿಚಾರಣೆಯ ಅವಧಿಯೊಳಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ತುರ್ತಾಗಿ ದುರಸ್ಥಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನ ನೀಡಿದೆ ಎಂದು ಅರ್ಜಿದಾರ ವಿರೂಪಾಕ್ಷಯ್ಯ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.
ಅಲ್ಲದೆ, ಮೈಸೂರಿನ ವ್ಯಕ್ತಿಯೊಬ್ಬರು ರಾಜಪರಂಪರೆಯ ಈ ಅರಮನೆ ಆಸ್ತಿ ಬಗ್ಗೆ ಹಕ್ಕು ಚಲಾಯಿ ಸುತ್ತಿರುವ ಕುರಿತು ಆಕ್ಷೇಪಣಾ ಅರ್ಜಿ ಸಲ್ಲಿಸುವದರೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ವಾಧೀನದಲ್ಲೇ ಕೋಟೆ ಮತ್ತು ಅರಮನೆಯ ರಕ್ಷಣೆಗೆ ಕೋರಲಾಗಿದೆ.
ಪ್ರಮಾಣ ಪತ್ರ : ಈ ನಡುವೆ ಕೊಡಗು ಜಿಲ್ಲಾಡಳಿತ ಕೂಡ ಕೋಟೆ ಆವರಣದಲ್ಲಿ; ಕೊಡಗು ಜಿಲ್ಲಾ ಪಂಚಾಯತ್, ನ್ಯಾಯಾಂಗ ಇಲಾಖೆ, ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಂಥಾಲಯ ಸಹಿತ ಒಟ್ಟು 8 ಇಲಾಖೆಗಳ ಕಚೇರಿಗಳ ಸ್ಥಳಾಂತರಕ್ಕೆ ಕಾಲಾವಕಾಶದೊಂದಿಗೆ ಪ್ರಮಾಣ ಪತ್ರ ಸಲ್ಲಿಸಿದೆ. ಈ ಎಲ್ಲವನ್ನೂ ಪರಿಗಣಿಸ ಲಿರುವ ಉಚ್ಛ ನ್ಯಾಯಾಲಯ ಮುಂದಿನ ವಿಚಾರಣೆಯನ್ನು 6, 9ಕ್ಕೆ ಮುಂದೂಡಿ ಆದೇಶಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.