ಸಿದ್ದಾಪುರ, ಆ. 15: ಕೊಡಗು ಸೇವಾ ಭಾರತಿ ತಂಡವು ಪ್ರವಾಹದಿಂದ ತತ್ತರಿಸಿದ ಕರಡಿಗೋಡುವಿನಲ್ಲಿ ಮನೆಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಪ್ರವಾಹದಿಂದ ನೆಲಸಮವಾದ ಮನೆಗಳಡಿಯಲ್ಲಿ ಸಿಲುಕಿದ ಸಾಮಗ್ರಿಗಳನ್ನು ತೆಗೆಯುವ ಹಾಗೂ ಕೆಸರಿನಿಂದ ತುಂಬಿದ್ದ ಮನೆಗಳನ್ನು ಶುಚಿಗೊಳಿಸುವ ಸೇವಾ ಕಾರ್ಯದಲ್ಲಿ ತೊಡಗಿದೆ.

ಸೇವಾ ಭಾರತಿ ಕೊಡಗು ಅಧ್ಯಕ್ಷ ಟಿ.ಸಿ. ಚಂದ್ರನ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವೀರಾಜಪೇಟೆ ತಾಲೂಕು ಸಂಘ ಚಾಲಕ ಪ್ರಿನ್ಸ್ ಗಣಪತಿ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ 60 ಕ್ಕೂ ಹೆಚ್ಚು ಸ್ವಯಂಸೇವಕರು ಕರಡಿಗೋಡುವಿಗೆ ಆಗಮಿಸಿ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಭೀಕರ ಮಳೆಗೆ ಕರಡಿಗೋಡುವಿನ ನದಿ ತಟದ ಪ್ರದೇಶಗಳಲ್ಲಿರುವ ಎಲ್ಲ ಮನೆಗಳು ಜಲಾವೃತವಾಗಿದ್ದು, ಅವುಗಳ ಪೈಕಿ ಬಹಳಷ್ಟು ಮನೆಗಳು ಪ್ರವಾಹದಿಂದ ನೆಲಸಮವಾಗಿವೆ. ಕೆಲವಷ್ಟು ಮನೆಗಳು ಮಾತ್ರ ಉಳಿದಿದ್ದು ಅವುಗಳು ಕೆಸರು ತುಂಬಿ ದುರ್ವಾಸನೆ ಬೀರುತಿದ್ದು ಸೇವಾ ಭಾರತೀಯ ಕಾರ್ಯಕರ್ತರು ಇವುಗಳ ಸ್ವಚ್ಛತೆಯಲ್ಲಿ ತೊಡಗಿದ್ದು ಕುಸಿದ ಮನೆಗಳ ಅಡಿಯಲ್ಲಿರುವ ಪದಾರ್ಥಗಳನ್ನು ತೆಗೆಯುವದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಾವಿನ ಭಯ: ಪ್ರವಾಹದಲ್ಲಿ ಹಲವಷ್ಟು ಮನೆಗಳು ಜಲಾವೃತವಾಗಿ ನೀರು ಇಳಿದ ಮೇಲೆ ಮನೆ ತುಂಬಾ ಕೆಸರುಮಯವಾಗಿದೆ. ಕೆಸರು ನಿಂತ ಮನೆಯೊಳಗೆ ಈಗ ಹಾವುಗಳ ಉಪಟಳ ಪ್ರಾರಂಭವಾಗಿದ್ದು, ಬಹಳ ಮನೆಗಳ ಒಳಗೆ ಹಾವುಗಳು ಬೀಡು ಬಿಟ್ಟಿವೆ. ಮನೆ ಮಂದಿ ಮನೆ ಸ್ವಚ್ಛ ಮಾಡಲು ಒಳಗೆ ಪ್ರವೇಶಸುವ ಸಂದರ್ಭ ಹಾವುಗಳನ್ನು ಕಂಡು ಭಯಭೀತರಾಗಿ ಹೊರಕ್ಕೆ ಓಡಿ ಬರುತ್ತಿರುವದು ಸಾಮಾನ್ಯವಾಗಿದೆ.